ಬಗ್ರಾಮ್ ವಾಯುನೆಲೆ ಮರಳಿ ಪಡೆಯಲು ಮುಂದಾದರೆ ಅಮೆರಿಕ ಜೊತೆ ಯುದ್ಧಕ್ಕೆ ಸಿದ್ಧ: ತಾಲಿಬಾನ್ ಎಚ್ಚರಿಕೆ
PC ; aljazeera.com
ಕಾಬೂಲ್, ಸೆ.23: ಬಗ್ರಾಮ್ ವಾಯುನೆಲೆಯ ನಿಯಂತ್ರಣವನ್ನು ಮತ್ತೆ ಪಡೆಯಲು ಅಮೆರಿಕ ಪ್ರಯತ್ನಿಸಿದರೆ ಯುದ್ಧಕ್ಕೆ ಸಂಪೂರ್ಣ ಸಿದ್ಧವಾಗಿರುವಂತೆ ಕಂದಹಾರ್‌ನಲ್ಲಿ ನಡೆದ ತಾಲಿಬಾನ್‍ನ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಅಮೆರಿಕದ ಇಂತಹ ಪ್ರಯತ್ನಗಳನ್ನು ಪಾಕಿಸ್ತಾನ ಬೆಂಬಲಿಸುವುದು ಪಾಕ್ ಮತ್ತು ಅಫ್ಘಾನ್ ನಡುವೆ ನೇರ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ತಾಲಿಬಾನ್ ಎಚ್ಚರಿಸಿದೆ. ಅಫ್ಘಾನಿಸ್ತಾನದ ಪರ್ವಾನ್ ಪ್ರಾಂತದಲ್ಲಿರುವ ಬಗ್ರಾಮ್ ವಾಯುನೆಲೆ ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಅತೀ ದೊಡ್ಡ ಮಿಲಿಟರಿ ನೆಲೆಯಾಗಿತ್ತು. ಬಗ್ರಾಮ್ ವಾಯುನೆಲೆಯನ್ನು ನಿರ್ಮಿಸಿದ ಅಮೆರಿಕಾಕ್ಕೆ ಅದನ್ನು ಹಿಂದಿರುಗಿಸದಿದ್ದರೆ ಕೆಟ್ಟ ಸಂಗತಿಗಳು ಸಂಭವಿಸಲಿವೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟ್ರಂಪ್ ಬೆದರಿಕೆ ಒಡ್ಡಿದ್ದರು.
ತಾಲಿಬಾನ್‍ನ ಪರಮೋಚ್ಛ ನಾಯಕ ಹಿಬಾತುಲ್ಲಾ ಅಖುಂಡ್ಜಾದಾ ನೇತೃತ್ವದಲ್ಲಿ ಕಂದಹಾರ್‌ನಲ್ಲಿ ನಡೆದ ರಹಸ್ಯ ಸಭೆಯಲ್ಲಿ ಕ್ಯಾಬಿನೆಟ್ ಸದಸ್ಯರು, ಗುಪ್ತಚರ ಮುಖ್ಯಸ್ಥರು, ಮಿಲಿಟರಿ ಕಮಾಂಡರ್‌ಗಳು, ಉಲೆಮಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಬಗ್ರಾಮ್ ವಾಯುನೆಲೆಯನ್ನು ಅಮೆರಿಕಾದ ನಿಯಂತ್ರಣಕ್ಕೆ ನೀಡುವ ಯಾವುದೇ ಸಾಧ್ಯತೆಯನ್ನು ಸಭೆ ಸರ್ವಾನುಮತದಿಂದ ತಿರಸ್ಕರಿಸಿದ್ದು ಒಂದು ವೇಳೆ ದಾಳಿ ನಡೆದರೆ ಯುದ್ಧಕ್ಕೆ ಸಂಪೂರ್ಣ ಸಿದ್ಧವಾಗಿರುವುದಾಗಿ ತಾಲಿಬಾನ್ ಹೇಳಿದೆ.