×
Ad

ತಮಿಳುನಾಡಿಗೀಗ 'ಆನೆ ಬಲ'!

ರಾಜ್ಯಮಟ್ಟದ ಆನೆ ಸಮೀಕ್ಷೆಯಲ್ಲಿ ಬಹಿರಂಗ

Update: 2025-10-07 21:14 IST

 ಸಾಂದರ್ಭಿಕ ಚಿತ್ರ

ಚೆನ್ನೈ: ತಮಿಳುನಾಡಿನಲ್ಲಿ ಸತತ ಎರಡನೇ ವರ್ಷವೂ ಆನೆಗಳ ಸಂಖ್ಯೆ ಏರಿಕೆಯಾಗಿದೆ ಎಂದು ಇತ್ತೀಚಿನ ಸಮೀಕ್ಷೆ ವರದಿ ಬಹಿರಂಗಪಡಿಸಿದೆ.

ಕಳೆದ ವರ್ಷ 3,063 ಆನೆಗಳ ಸಂಖ್ಯೆ ದಾಖಲಾಗಿದ್ದರೆ, ಈ ವರ್ಷ ಆ ಸಂಖ್ಯೆ 3,170ಕ್ಕೆ ಏರಿಕೆಯಾಗಿದೆ. ತಮಿಳುನಾಡು ಮತ್ತು ಕರ್ನಾಟಕ ಅರಣ್ಯ ಇಲಾಖೆಗಳ ಸಂಯುಕ್ತ ಸಹಕಾರದೊಂದಿಗೆ ಮೇ 23ರಿಂದ 25ರವರೆಗೆ ನಡೆದ ಆನೆ ಸಮೀಕ್ಷೆಯ ವೇಳೆ ಈ ಅಂಕಿಅಂಶಗಳು ಹೊರಬಿದ್ದಿವೆ.

ರಾಜ್ಯದ ಒಟ್ಟು ಆನೆಗಳ ಪೈಕಿ ವಯಸ್ಕ ಆನೆಗಳ ಪ್ರಮಾಣ ಶೇಕಡಾ 44ರಷ್ಟಿದೆ. ಗಂಡು ಮತ್ತು ಹೆಣ್ಣು ಆನೆಗಳ ಲಿಂಗಾನುಪಾತ 1:1.77 ಆಗಿದ್ದು, ನೆರೆಯ ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿಯೂ ಇದೇ ರೀತಿಯ ಅನುಪಾತ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಹುಲಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಸಂರಕ್ಷಣಾಲಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳು ಸೇರಿದಂತೆ ಒಟ್ಟು 26 ಅರಣ್ಯ ವಿಭಾಗಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ 2,043 ಸಿಬ್ಬಂದಿ ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.

“ಆನೆ ಸಂರಕ್ಷಣೆಗೆ ಕೈಗೊಂಡ ಪರಿಸರ ಸ್ನೇಹಿ ಕ್ರಮಗಳು, ಅರಣ್ಯ ಪ್ರದೇಶಗಳಲ್ಲಿ ನೀರು ಮತ್ತು ಆಹಾರ ಲಭ್ಯತೆಯ ಸುಧಾರಣೆ ಹಾಗೂ ಮಾನವ-ಆನೆ ಘರ್ಷಣೆ ತಗ್ಗಿಸುವ ಪ್ರಯತ್ನಗಳು ಫಲ ನೀಡಿವೆ” ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News