ಫ್ರಾನ್ಸ್: ಶಾಲೆಯಲ್ಲಿ ಚೂರಿ ಇರಿತ
Update: 2023-10-13 23:06 IST
ಸಾಂದರ್ಭಿಕ ಚಿತ್ರ
ಪ್ಯಾರಿಸ್: ಫ್ರಾನ್ಸ್ ನ ಅರಾಸ್ ನಗರದಲ್ಲಿನ ಶಾಲೆಯೊಂದರಲ್ಲಿ ನಡೆದ ಚೂರಿ ಇರಿತ ಪ್ರಕರಣದಲ್ಲಿ ಶಿಕ್ಷಕ ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿದ್ದಾರೆ. ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅರಾಸ್ ನಗರದ ಗ್ಯಾಂಬೆಟ ಹೈಸ್ಕೂಲ್ ನಲ್ಲಿ ಈ ಪ್ರಕರಣ ವರದಿಯಾಗಿದೆ. ಬೆಳಿಗ್ಗೆ ಶಾಲೆಯ ಆವರಣ ಪ್ರವೇಶಿಸಿದ ವ್ಯಕ್ತಿ ಏಕಾಏಕಿ ಚೂರಿಯಿಂದ ಹಲವರ ಮೇಲೆ ದಾಳಿ ನಡೆಸಿದ್ದಾನೆ. ದಾಳಿಕೋರ ಈ ಶಾಲೆಯ ಹಳೆವಿದ್ಯಾರ್ಥಿ ಮತ್ತು ಚೆಚೆನ್ ಮೂಲದ ಯುವಕನಾಗಿದ್ದು ಫ್ರಾನ್ಸ್ ನ ರಾಷ್ಟ್ರೀಯ ಭದ್ರತಾ ರಿಜಿಸ್ಟರ್ ನಲ್ಲಿ ಈತನ ಹೆಸರಿದೆ ಎಂದು ಆಂತರಿಕ ಸಚಿವ ಜೆರಾಲ್ಡ್ ದರ್ಮಾನಿಯನ್ ಟ್ವೀಟ್ ಮಾಡಿದ್ದಾರೆ. ದಾಳಿಯಲ್ಲಿ ಯಾವುದೇ ವಿದ್ಯಾರ್ಥಿ ಗಾಯಗೊಂಡಿಲ್ಲ. ಆದರೆ ಭದ್ರತಾ ಸಿಬಂದಿ ಹಾಗೂ ಮತ್ತೊಬ್ಬ ಶಿಕ್ಷಕ ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.