ಬೀಫ್ ಸೇವನೆ ಕಾರಣಕ್ಕೆ ವಿದ್ಯಾರ್ಥಿನಿಯ ಹಿಜಾಬ್ ನಿಂದ ಶೂ ಪಾಲಿಶ್ ಮಾಡಿಸಿದ ಶಿಕ್ಷಕರು ; ಆರೋಪ
ಸಾಂದರ್ಭಿಕ ಚಿತ್ರ
ಕೊಯಮತ್ತೂರು: ಧರ್ಮ ಹಾಗೂ ಬೀಫ್ ತಿನ್ನುವ ಕಾರಣಕ್ಕೆ ತಮ್ಮ ಪುತ್ರಿಗೆ ಇಬ್ಬರು ಶಿಕ್ಷಕರು ಕಿರುಕುಳ ನೀಡಿದ್ದಾರೆ ಹಾಗೂ ಥಳಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಅಶೋಕಪುರಂ ಸರಕಾರಿ ಪ್ರೌಢ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯ ಕುಟುಂಬ ಮಂಗಳವಾರ ಮುಖ್ಯ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿದೆ.
ಶಿಕ್ಷಕರಾದ ಅಭಿನಯ ಹಾಗೂ ರಾಜ್ ಕುಮಾರ್ ತಮ್ಮ ಪುತ್ರಿಗೆ ಶೂ ಪಾಲಿಶ್ ಮಾಡಲು ಕೂಡ ಬಲವಂತಪಡಿಸಿದ್ದರು ಎಂದು ಕುಟುಂಬ ದೂರಿನಲ್ಲಿ ಹೇಳಿದೆ. ವಿದ್ಯಾರ್ಥಿನಿಯ ಕುಟುಂಬಕ್ಕೆ ಬೆಂಬಲ ನೀಡುತ್ತಿರುವ ಸಾಮಾಜಿಕ ಹೋರಾಟಗಾರ ಹುಸೈನ್, ಸುಮಾರು ಎರಡು ತಿಂಗಳಿಂದ ಈ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಶಿಕ್ಷಕಿ ಹಿಜಾಬ್ ಧರಿಸಿ ಶಾಲೆಗೆ ಬರುವ ಮಕ್ಕಳನ್ನು ಇಷ್ಟಪಡುತ್ತಿರಲಿಲ್ಲ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಕಳೆದ ಕೆಲವು ತಿಂಗಳುಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಕಿಯ ಹೆತ್ತವರು ದೂರಿನಲ್ಲಿ ಹೇಳಿದ್ದಾರೆ.
‘‘ಎರಡು ತಿಂಗಳ ಹಿಂದೆ ಶಿಕ್ಷಕಿ ಪುತ್ರಿಯಲ್ಲಿ ನನ್ನ ಕೆಲಸದ ಬಗ್ಗೆ ಕೇಳಿದ್ದರು. ಆಕೆ ನಾನು ಬೀಫ್ ಹಾಗೂ ಮಾಂಸದ ಅಂಗಡಿ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಳು. ಎರಡು ವಾರಗಳ ಹಿಂದೆ ಶಿಕ್ಷಕಿ ನನ್ನ ಪುತ್ರಿಗೆ ಥಳಿಸಿದ್ದಾರೆ ಹಾಗೂ ಬೀಫ್ ತಿನ್ನುವ ಬಗ್ಗೆ ಟೀಕಿಸಿದ್ದಾರೆ’’ ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಈ ವಿಷಯವನ್ನು ಕುಟುಂಬ ಮುಖ್ಯೋಪಾಧ್ಯಾಯಿನಿಯ ಗಮನಕ್ಕೆ ತಂದಾಗ, ಅವರು ಶಿಕ್ಷಕಿಗೆ ಬೆಂಬಲ ನೀಡಿದರು ಹಾಗೂ ತಮ್ಮ ದೂರಿನ ಮೇಲೆ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದರು. ದೂರು ನೀಡಿದ ಬಳಿಕವೂ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕಿ ಅಭಿನಯ ತನ್ನ ಪುತ್ರಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದರು. ಈ ಹಿನ್ನೆಲೆಯಲ್ಲಿ ನಾವು ಮುಖ್ಯ ಶಿಕ್ಷಣಾಧಿಕಾರಿ ಆರ್. ಬಾಲಮುರಳಿ ಅವರಿಗೆ ದೂರು ಸಲ್ಲಿಸಿದೆವು ಎಂದು ಹೆತ್ತವರು ಹೇಳಿದ್ದಾರೆ.
‘‘ನಮ್ಮ ಪ್ರವೇಶದಿಂದ ಪೊಲೀಸ್ ಉಪ ಆಯುಕ್ತ ಹಾಗೂ ಸ್ಥಳೀಯ ಪೊಲೀಸರು ಶಾಲೆಗೆ ಭೇಟಿ ನೀಡಿದ್ದಾರೆ ಹಾಗೂ ಬಾಲಕಿಯ ರಕ್ಷಣೆಯ ಭರವಸೆ ನೀಡಿದ್ದಾರೆ. ಆದರೆ, ಕಿರುಕುಳ ಮುಂದುವರಿದಿದೆ. ತನಗೆ ಥಳಿಸಲಾಗಿದೆ ಹಾಗೂ ಹಿಜಾಬ್ನಿಂದ ಇತರರ ಶೂಗಳನ್ನು ಸ್ವಚ್ಛಗೊಳಿಸುವಂತೆ ಬಲವಂತಪಡಿಸಲಾಗಿದೆ ಎಂದು ಆಕೆ ಬಹಿರಂಗಪಡಿಸಿದ್ದಾಳೆ. ಆಕೆಗೆ ಟಿಸಿ ನೀಡುವುದಾಗಿ ಶಾಲೆಯ ಆಡಳಿತ ಮಂಡಳಿ ಬೆದರಿಕೆ ಒಡ್ಡುತ್ತಿದೆ’’ ಎಂದು ಹುಸೈನ್ ತಿಳಿಸಿದ್ದಾರೆ.
ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ‘‘ನಾನು ಹೆತ್ತವರಿಂದ ದೂರು ಸ್ವೀಕರಿಸಿದ್ದೇನೆ. ತನಿಖೆಗೆ ಆದೇಶಿಸಲಾಗುವುದು’’ ಎಂದು ಮುಖ್ಯ ಶಿಕ್ಷಣಾಧಿಕಾರಿ ಆರ್. ಬಾಲಮುರಳಿ ತಿಳಿಸಿದ್ದಾರೆ.