ಚಾಂಪಿಯನ್ಸ್ ಟ್ರೋಫಿಗೆ ಉಗ್ರರ ಭೀತಿ; ಪಾಕಿಸ್ತಾನದ ಗುಪ್ತಚರ ಬ್ಯೂರೋ ಕಟ್ಟೆಚ್ಚರ
PC: x.com/CricketNDTV
ದುಬೈ: ಪಾಕಿಸ್ತಾನದ ಆತಿಥ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ವೇಳೆ ವಿದೇಶಿ ಅತಿಥಿಗಳನ್ನು ಅಪಹರಿಸುವ ಪಿತೂರಿ ಬೆಳಕಿಗೆ ಬಂದಿದ್ದು, ಪಾಕಿಸ್ತಾನದ ಗುಪ್ತಚರ ಬ್ಯೂರೋ ಕಟ್ಟೆಚ್ಚರ ವಹಿಸಿದೆ.
ಭಾರತವನ್ನು ಹೊರತುಪಡಿಸಿ ಉಳಿದೆಲ್ಲ ತಂಡಗಳು ಪಾಕಿಸ್ತಾನದಲ್ಲಿ ತಮ್ಮ ಪಂದ್ಯಗಳನ್ನು ಆಡುತ್ತಿದ್ದು, ಭಾರತ ಫೈನಲ್ ತಲುಪಲು ವಿಫಲವಾದಲ್ಲಿ ಫೈನಲ್ ಪಂದ್ಯ ಕೂಡಾ ಪಾಕಿಸ್ತಾನದಲ್ಲೇ ನಡೆಯಲಿದೆ. ಆದರೆ ಅಪಹರಣ ಪಿತೂರಿ ಬಹಿರಂಗವಾದ ಹಿನ್ನೆಲೆಯಲ್ಲಿ ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ್, ಐಎಸ್ಐಎಸ್ ಮತ್ತು ಇತರ ಬಲೂಚಿಸ್ತಾನ ಮೂಲದ ಗುಂಪುಗಳ ವಿರುದ್ಧ ಎಚ್ಚರಿಕೆ ನೋಟಿಸ್ ನೀಡಲಾಗಿದೆ ಎಂದು ಸಿಎನ್ಎನ್-ನ್ಯೂಸ್18 ವರದಿ ಹೇಳಿದೆ. ತಂಡಗಳಿಗೆ ಅತ್ಯುನ್ನತ ಮಟ್ಟದ ಬಿಗಿ ಭದ್ರತೆ ಒದಗಿಸಲಾಗಿದ್ದು, ರೇಜಂರ್ಗಳು ಮತ್ತು ಸ್ಥಳೀಯ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ವಿವರಿಸಲಾಗಿದೆ.
ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಭಾರತ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತ ತಂಡ ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಈಗಾಗಲೇ ಸೆಮಿಫೈನಲ್ ತಲುಪಿರುವುದರಿಂದ ಸೆಮಿಫೈನಲ್ ಪಂದ್ಯ ಹಾಗೂ ಫೈನಲ್ ತಲುಪಿದಲ್ಲಿ ಫೈನಲ್ ಪಂದ್ಯ ಕೂಡಾ ದುಬೈನಲ್ಲಿ ನಡೆಯಲಿದೆ. ಭಾರತದ ಎದುರಾಳಿ ತಂಡಗಳು ದುಬೈಗೆ ಪ್ರಯಾಣ ಬೆಳೆಸಬೇಕಾಗುತ್ತದೆ.
ಪಾಕಿಸ್ತಾನದಲ್ಲಿ ನಡೆಯುವ ಅಂತರರಾಷ್ಟ್ರೀಯ ಟೂರ್ನಿಗಳಿಗೆ ಭದ್ರತೆ ದೊಡ್ಡ ಕಳವಳಕಾರಿ ಅಂಶವಾಗಿದ್ದು, 2009ರಲ್ಲಿ ಶ್ರೀಲಂಕಾ ತಂಡಕ್ಕೆ ಕಹಿ ಅನುಭವವಾದ ಬಳಿಕ ಇದು ಮತ್ತಷ್ಟು ಹೆಚ್ಚಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಆಗಮಿಸಲು ನಿರಾಕರಿಸಿದ ಬಳಿಕ, ಇತರ ಎಲ್ಲ ತಂಡಗಳಿಗೆ ಸಂಪೂರ್ಣ ಭದ್ರತೆ ಒದಗಿಸುವ ಭರವಸೆಯನ್ನು ಪಿಸಿಬಿ ನೀಡಿತ್ತು. ಲಾಹೋರ್ ಮತ್ತು ರಾವಲ್ಪಿಂಡಿ ನಗರಗಳಲ್ಲಿ ನಡೆಯುವ ಪಂದ್ಯಗಳಿಗೆ 12 ಸಾವಿರ ಮಂದಿ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28