×
Ad

ಆತ್ಮರಕ್ಷಣೆ ಕ್ರಮಗಳನ್ನು ತೀವ್ರಗೊಳಿಸಲು ಸಿದ್ಧವಾಗಿದ್ದೇವೆ: ಕಾಂಬೋಡಿಯಾಕ್ಕೆ ಥೈಲ್ಯಾಂಡ್ ಎಚ್ಚರಿಕೆ

Update: 2025-07-25 22:36 IST

PC :  X 


ಬ್ಯಾಂಕಾಕ್, ಜು.25: ಕಾಂಬೋಡಿಯಾವು ತನ್ನ ಸಶಸ್ತ್ರ ದಾಳಿಗಳನ್ನು ಮತ್ತು ಥೈಲ್ಯಾಂಡ್‌ ನ ಸಾರ್ವಭೌಮತ್ವದ ಮೇಲಿನ ಉಲ್ಲಂಘನೆಯನ್ನು ಮುಂದುವರಿಸಿದರೆ ನಮ್ಮ ಆತ್ಮರಕ್ಷಣೆ ಕ್ರಮಗಳನ್ನು ತೀವ್ರಗೊಳಿಸಲು ಸಿದ್ಧರಿದ್ದೇವೆ ಎಂದು ಥೈಲ್ಯಾಂಡ್ ಸರಕಾರ ಶುಕ್ರವಾರ ಎಚ್ಚರಿಕೆ ನೀಡಿದೆ.

ಅಲ್ಲದೆ ಕಾಂಬೋಡಿಯಾದಿಂದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಥೈಲ್ಯಾಂಡ್ ಘೋಷಿಸಿದ್ದು ಥೈಲ್ಯಾಂಡ್‍ನಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಳ್ಳುವಂತೆ ಕಾಂಬೋಡಿಯಾಕ್ಕೆ ಸೂಚಿಸಿದೆ. ಈ ಮಧ್ಯೆ, 13 ವರ್ಷಗಳಲ್ಲೇ ಎರಡು ದೇಶಗಳ ನಡುವಿನ ಅತ್ಯಂತ ಭೀಕರ ಹೋರಾಟದ ಹಿನ್ನೆಲೆಯಲ್ಲಿ ಥೈಲ್ಯಾಂಡ್‌ ನ 1 ಲಕ್ಷಕ್ಕೂ ಅಧಿಕ ನಾಗರಿಕರನ್ನು ಗಡಿಭಾಗದಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿರುವುದಾಗಿ ವರದಿಯಾಗಿದೆ.

ಈಶಾನ್ಯ ಪ್ರಾಂತದ ಗಡಿಭಾಗದ ಬಳಿ ನೆಲಬಾಂಬ್ ಸಿಡಿದು ಥೈಲ್ಯಾಂಡ್‌ ನ ಯೋಧನೊಬ್ಬ ಕಾಲನ್ನು ಕಳೆದುಕೊಂಡ ಬಳಿಕ ಈ ಪ್ರಾಂತದಲ್ಲಿರುವ ಗಡಿದಾಟುಗಳನ್ನು ಮುಚ್ಚಿರುವುದಾಗಿ ಥೈಲ್ಯಾಂಡ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಗುರುವಾರ ಎರಡೂ ದೇಶಗಳ ಪಡೆಗಳು ಗಡಿಭಾಗದಲ್ಲಿ ಗುಂಡು, ಫಿರಂಗಿ ದಾಳಿ ನಡೆಸಿದ್ದವು. ಬಳಿಕ ಕಾಂಬೋಡಿಯಾದ ಗುರಿಗಳ ಮೇಲೆ ಬಾಂಬ್ ದಾಳಿ ನಡೆಸಲು ಥೈಲ್ಯಾಂಡ್ ಎಫ್-16 ಜೆಟ್ ವಿಮಾನಗಳನ್ನು ನಿಯೋಜಿಸಿತ್ತು.

► ಗಡಿ ವಿವಾದದ ಮೂಲ

ಎರಡೂ ದೇಶಗಳ ನಡುವಿನ ಗಡಿಯ ಬಳಿ ಇರುವ ಅತ್ಯಂತ ಸಣ್ಣ ಪ್ರದೇಶ ವಿವಾದದ ಮೂಲ ಬಿಂದುವಾಗಿದ್ದು ಇದರ ಮೇಲೆ ಎರಡೂ ದೇಶಗಳು ಹಕ್ಕು ಪ್ರತಿಪಾದಿಸುತ್ತಿವೆ. ಈ ಮಧ್ಯೆ, ಗಡಿ ವಿವಾದವನ್ನು ನಿರ್ವಹಿಸುವಲ್ಲಿ ನೈತಿಕತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಥೈಲ್ಯಾಂಡ್‌ ನ ಮಾಜಿ ಪ್ರಧಾನಿ ಪಟೊಂಗ್‍ಟಾರ್ನ್ ಶಿನಾವತ್ರ ಅವರನ್ನು ಜುಲೈ 1ರಂದು ಅಮಾನತುಗೊಳಿಸಲಾಗಿದೆ.

ಇದರ ಜೊತೆಗೆ, 1 ಸಾವಿರ ವರ್ಷ ಪುರಾತನವಾದ ಪ್ರೆಹ್ ವಿಹಿಯರ್ ದೇವಸ್ಥಾನಕ್ಕೆ ಸಂಬಂಧಿಸಿದ ವಿವಾದವೂ ಎರಡು ದೇಶಗಳ ಸಂಬಂಧವನ್ನು ಹದಗೆಡಿಸಿದೆ. 1962ರಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯವು ಈ ದೇವಸ್ಥಾನವಿರುವ ಪ್ರದೇಶದ ಸಾರ್ವಭೌಮತ್ವವನ್ನು ಕಾಂಬೋಡಿಯಾಕ್ಕೆ ನೀಡಿತ್ತು. ಇದನ್ನು ಥೈಲ್ಯಾಂಡ್ ವಿರೋಧಿಸಿದ ಬಳಿಕ ಉಭಯ ದೇಶಗಳ ನಡುವೆ ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಈ ಮಧ್ಯೆ 2011ರಲ್ಲಿ ಕಾಂಬೋಡಿಯಾ ಮತ್ತೆ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದಾಗ ತನ್ನ ತೀರ್ಪನ್ನು ನ್ಯಾಯಾಲಯ ಪುನರುಚ್ಚರಿಸಿತ್ತು. ಇದನ್ನು ಪ್ರಶ್ನಿಸಿ ಥೈಲ್ಯಾಂಡ್ 2013ರಲ್ಲಿ ಮೇಲ್ಮನವಿ ಸಲ್ಲಿಸಿದಾಗಲೂ ನ್ಯಾಯಾಲಯದ ತೀರ್ಪು ಕಾಂಬೋಡಿಯಾ ಪರ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News