USA | ಥ್ಯಾಂಕ್ಸ್ ಗಿವಿಂಗ್ ನಲ್ಲಿ ವಧೆಯಾದ ಟರ್ಕಿ ಪಕ್ಷಿಗಳಿಗಾಗಿ ಜೈನರಿಂದ ನವಕಾರ ಮಂತ್ರ ಪಠಣ!
► ಮಾಂಸಾಹಾರದ ಸಂಭ್ರಮದ ನಡುವೆ ಅಹಿಂಸೆಯ ಸಂದೇಶ ► ಮಿಶಿಗನ್ ನಲ್ಲಿ ದಶಕಕ್ಕೂ ಮೀರಿದ ವಿಶಿಷ್ಟ ಸಂಪ್ರದಾಯ
ಸಾಂದರ್ಭಿಕ ಚಿತ್ರ | Photo Credit : AI
ನ್ಯೂಯಾರ್ಕ್, ನ.29: ಅಮೆರಿಕದಲ್ಲಿ ಥ್ಯಾಂಕ್ಸ್ಗಿವಿಂಗ್ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಜನರು ಟರ್ಕಿ ಪಕ್ಷಿಯ ಮಾಂಸದ ಭೋಜನದೊಂದಿಗೆ ಸಂಭ್ರಮಿಸಿದರೆ, ಅಲ್ಲಿನ ಜೈನ ಸಮುದಾಯದ ಸದಸ್ಯರು ಹಬ್ಬಕ್ಕಾಗಿ ವಧೆಗೀಡಾದ ಟರ್ಕಿ ಪಕ್ಷಿಗಳನ್ನು ಸ್ಮರಿಸಿ ಅವುಗಳ ಆತ್ಮಗಳ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನವಕಾರ ಮಂತ್ರ ಪಠಿಸುವ ಮೂಲಕ ಪ್ರಾಣಿಗಳ ಬಗ್ಗೆಯೂ ಕರುಣೆ ತೋರಿಸುವ ಜೈನ ಧರ್ಮದ ಅಹಿಂಸಾ ತತ್ವವನ್ನು ಸಾರಿದ್ದಾರೆ ಎಂದು ‘India Today’ ವರದಿ ಮಾಡಿದೆ.
ಅಮೆರಿಕದ ಸಂಪ್ರದಾಯದಂತೆ ನ. ತಿಂಗಳ ನಾಲ್ಕನೇ ಗುರುವಾರ ಥ್ಯಾಂಕ್ಸ್ ಗಿವಿಂಗ್ ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ನ. 26ರಂದು ಹಬ್ಬ ಆಚರಿಸಲಾಯಿತು. ದೇಶಾದ್ಯಂತ ಟರ್ಕಿ ಪಕ್ಷಿಯ ಮಾಂಸ ಹಬ್ಬದ ಭೋಜನದ ಪ್ರಮುಖ ಆಹಾರವಾಗಿದ್ದರೆ, ಮಿಶಿಗನ್ ನ ಜೈನ ಸಮುದಾಯವು ಫಾರ್ಮಿಂಗ್ಟನ್ ಹಿಲ್ಸ್ ನಲ್ಲಿರುವ ದೇವಾಲಯದಲ್ಲಿ ವಿಶೇಷ ಪ್ರಾರ್ಥನಾ ಕಾರ್ಯಕ್ರಮ ಆಯೋಜಿಸಿತ್ತು.
ಜೈನ ಸೊಸೈಟಿ ಆಫ್ ಗ್ರೇಟರ್ ಡೆಟ್ರಾಯಿಟ್ ಆಯೋಜಿಸಿದ್ದ ‘ಥ್ಯಾಂಕ್ಸ್ಗಿವಿಂಗ್ ಡೇ ನವಕಾರ್ ಜಾಪ್’ ಕಾರ್ಯಕ್ರಮ ನ. 26ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನದವರೆಗೆ ನಡೆಯಿತು. ಜೈನ್ ಆರ್ಗನೈಸೇಶನ್ ಆಫ್ ಯೂತ್ ಆಕ್ಟಿವಿಟೀಸ್ (JOY) ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವ ಸದಸ್ಯರು ಸಂಪ್ರದಾಯವನ್ನು ಮುಂದುವರಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
►ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು
ಪ್ರತಿಯೊಂದು ಜೀವಿಯಲ್ಲೂ ಆತ್ಮವಿದೆ ಮತ್ತು ಎಲ್ಲ ಜೀವಿಗಳೂ ಕರುಣೆಗೆ ಅರ್ಹವಾಗಿವೆ ಎಂಬ ಜೈನ ಧರ್ಮದ ನಂಬಿಕೆಯೇ ಈ ಆಚರಣೆಯ ಹಿಂದಿನ ಆಶಯ. ಅಹಿಂಸಾ ತತ್ವವು ಮನುಷ್ಯರಿಗೆ ಮಾತ್ರ ಸೀಮಿತವಾಗಿರದೆ ಪ್ರಾಣಿಗಳು ಸೇರಿದಂತೆ ಎಲ್ಲ ಜೀವಿಗಳಿಗೂ ಅನ್ವಯಿಸುತ್ತದೆ. ಇದೇ ಕಾರಣಕ್ಕೆ ಜೈನರ ಆಹಾರ ಪದ್ಧತಿ ಮತ್ತು ದೈನಂದಿನ ಜೀವನದಲ್ಲೂ ಈ ತತ್ವ ಮಹತ್ವದ ಪಾತ್ರ ವಹಿಸುತ್ತದೆ.
ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಕ್ತರು ಜೈನ ಧರ್ಮದ ಅತ್ಯಂತ ಪವಿತ್ರ ಪ್ರಾರ್ಥನೆಗಳಲ್ಲಿ ಒಂದಾದ ನವಕಾರ ಮಂತ್ರವನ್ನು ಪಠಿಸುತ್ತಾರೆ. ಇದು ಭೌತಿಕ ಲಾಭಗಳನ್ನು ಬಯಸುವ ಪ್ರಾರ್ಥನೆಯಲ್ಲ. ಬದಲಿಗೆ, ಆಧ್ಯಾತ್ಮಿಕವಾಗಿ ಉನ್ನತ ಸ್ಥಿತಿಯನ್ನು ತಲುಪಿದ ಜೀವಿಗಳಿಗೆ ಗೌರವ ಸಲ್ಲಿಸುವುದು ಮತ್ತು ಅವರ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ಪಡೆಯುವುದು ಇದರ ಉದ್ದೇಶವಾಗಿದೆ.
ಮಿಶಿಗನ್ ನ ಜೈನ ಸಮುದಾಯವು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ. ‘ಜೈನ್ ಡೈಜೆಸ್ಟ್’ ವರದಿಯ ಪ್ರಕಾರ, ಥ್ಯಾಂಕ್ಸ್ ಗಿವಿಂಗ್ ಗಾಗಿ ವಧೆಗೀಡಾದ ಟರ್ಕಿ ಪಕ್ಷಿಗಳನ್ನು ಸ್ಮರಿಸಿ ಯುವ ಸಂಘಟನೆಯು ಪ್ರತಿವರ್ಷ ಪ್ರಾರ್ಥನಾ ಕಾರ್ಯಕ್ರಮ ಆಯೋಜಿಸುತ್ತದೆ. ಹಿರಿಯ ಭಕ್ತರೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಮೊದಲು ಕಿರಿಯ ಸದಸ್ಯರು ಉಪಾಹಾರ ತಯಾರಿಸಿ ಬಡಿಸುವ ಕೆಲಸದಲ್ಲೂ ಕೈಜೋಡಿಸುತ್ತಾರೆ.
►ಸಸ್ಯಾಹಾರಿ ಭೋಜನ, ಉಪವಾಸದ ಮೂಲಕವೂ ಆಚರಣೆ
ಜೈನರ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಥ್ಯಾಂಕ್ಸ್ ಗಿವಿಂಗ್ ಆಚರಿಸುವುದು ಮಿಶಿಗನ್ ಗೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕದ ವಿವಿಧ ಭಾಗಗಳಲ್ಲಿರುವ ಜೈನ ಕುಟುಂಬಗಳು ಪ್ರಾರ್ಥನಾ ಸಭೆಗಳು, ಉಪವಾಸ, ಸಸ್ಯಾಹಾರಿ ಭೋಜನ ಪದ್ಧತಿಗಳ ಮೂಲಕ ಹಬ್ಬ ಆಚರಿಸುತ್ತವೆ.
‘ರಿಲಿಜನ್ ನ್ಯೂಸ್ ಸರ್ವಿಸ್’ 2024ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಜೈನ ಕುಟುಂಬಗಳು ತಮ್ಮ ಸಾಂಸ್ಕೃತಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ಅಹಿಂಸಾ ತತ್ವಕ್ಕೂ ಬದ್ಧವಾಗಿವೆ. ಕೆಲವು ಕುಟುಂಬಗಳು ಸಸ್ಯಾಹಾರಿ ಸಾಮೂಹಿಕ ಭೋಜನ ಆಯೋಜಿಸಿದರೆ, ಇನ್ನು ಕೆಲವು ಕುಟುಂಬಗಳು ಆಧ್ಯಾತ್ಮಿಕ ಶಿಸ್ತಿನ ಭಾಗವಾಗಿ ಸರಳ ಆಹಾರ ಸೇವಿಸುವ ಧಾರ್ಮಿಕ ಉಪವಾಸ ಆಚರಿಸುತ್ತವೆ.
ಥ್ಯಾಂಕ್ಸ್ ಗಿವಿಂಗ್ ಗೆ ಟರ್ಕಿ ಪಕ್ಷಿ ಹೇಗೆ ಅವಿಭಾಜ್ಯವಾಯಿತು?
ಥ್ಯಾಂಕ್ಸ್ಗಿವಿಂಗ್ ಹಬ್ಬದ ಇತಿಹಾಸವು 1621ರಲ್ಲಿ ಮ್ಯಾಸಚೂಸೆಟ್ಸ್ ನ ಪ್ಲೈಮೌತ್ ನಲ್ಲಿ ಇಂಗ್ಲಿಷ್ ವಸಾಹತುಗಾರರು ಮತ್ತು ಸ್ಥಳೀಯ ವಾಂಪನೋಗ್ ಜನರು ಒಟ್ಟಾಗಿ ಆಚರಿಸಿದ ಸುಗ್ಗಿಯ ಹಬ್ಬದೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ, ಅಂದಿನ ಔತಣಕೂಟದಲ್ಲಿ ಟರ್ಕಿ ಪಕ್ಷಿಯ ಮಾಂಸ ಬಡಿಸಲಾಗಿತ್ತು ಎಂಬುದಕ್ಕೆ ಖಚಿತವಾದ ಐತಿಹಾಸಿಕ ಪುರಾವೆಗಳಿಲ್ಲ.
ಕಾಲಕ್ರಮೇಣ, ದೊಡ್ಡ ಗಾತ್ರ ಮತ್ತು ಸುಲಭ ಲಭ್ಯತೆಯಿಂದಾಗಿ ಟರ್ಕಿ ಪಕ್ಷಿ ಥ್ಯಾಂಕ್ಸ್ ಗಿವಿಂಗ್ ಹಬ್ಬದ ಪ್ರಮುಖ ಆಹಾರವಾಗಿ ಗುರುತಿಸಿಕೊಂಡಿತು. India Today ವರದಿಯಲ್ಲಿ ಉಲ್ಲೇಖಿಸಿರುವ ಅಂದಾಜಿನ ಪ್ರಕಾರ, ಅಮೆರಿಕನ್ನರು ಪ್ರತಿವರ್ಷ ಥ್ಯಾಂಕ್ಸ್ ಗಿವಿಂಗ್ ಸಂದರ್ಭದಲ್ಲಿ ಸುಮಾರು 4.6 ಕೋಟಿ ಟರ್ಕಿ ಪಕ್ಷಿಗಳನ್ನು ಆಹಾರಕ್ಕಾಗಿ ಬಳಸುತ್ತಾರೆ.
ಸೌಜನ್ಯ: India Today