Bangladesh | ದುರ್ಗಾಪೂಜಾ ಸಮಿತಿಯ ಮೇಲೆ BNP ಯುವ ಘಟಕದ ದಾಳಿ: ಕನಿಷ್ಠ 30 ಮಂದಿಗೆ ಗಾಯ
Photo Credit : Facebook/Sadya Sangbad
ಢಾಕಾ, ನ. 29: ಸಂಘಟನೆಗೆ ಅವಾಮಿ ಲೀಗ್ ನಾಯಕರನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ಮೇಲೆ, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (BNP) ಯುವ ಘಟಕವಾದ 'ಜುಬೊ ದಳ'ದ ಕಾರ್ಯಕರ್ತರು ಮತ್ತು 'ಬಾಂಗ್ಲಾದೇಶ ದುರ್ಗಾ ಪೂಜಾ ಉದ್ಜಾಪನ್ ಪರಿಷತ್' ಸದಸ್ಯರ ನಡುವೆ ಶನಿವಾರ ಘರ್ಷಣೆ ಸಂಭವಿಸಿದ್ದು, ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ.
ರಾಜಧಾನಿ ಢಾಕಾದಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ರಂಗ್ಪುರ ನಗರದಲ್ಲಿ ನಡೆದ ಈ ಘಟನೆಯಿಂದ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘರ್ಷಣೆಯ ವೇಳೆ ಕುರ್ಚಿಗಳನ್ನು ಎಸೆಯಲಾಗಿದ್ದು, ಸದಸ್ಯರ ಬಟ್ಟೆಗಳನ್ನು ಹರಿಯಲಾಗಿದೆ ಮತ್ತು ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲವಾದರೂ, ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ರಂಗ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಂಗ್ಲಾದೇಶ ಪೂಜಾ ಉದ್ಜಾಪನ್ ಪರಿಷತ್ ನ ಕೇಂದ್ರ ಸಮಿತಿಯ ಸಲಹೆಗಾರ ಸುಬ್ರತಾ ಚೌಧರಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಂಗ್ಪುರ ಮೆಟ್ರೋಪಾಲಿಟನ್ BNP ಸಂಚಾಲಕ ಮತ್ತು ರಂಗ್ಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಂಸುಝಮಾನ್ ಶಾಮು ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದರು. ಸಮಿತಿ ರಚನೆಯ ವಿಚಾರವಾಗಿ ಉಂಟಾದ ವಿವಾದದಿಂದಾಗಿ ಈ ಘರ್ಷಣೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಈಗ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ ಎಂದು ಅಧಿಕಾರಿ ಹೇಳಿದ್ದಾರೆ.