ಹೂತಿಗಳು ಮಾತುಕತೆಗೆ ಬಂದರೆ ಯೆಮೆನ್ ಯುದ್ಧ ನಾಳೆಯೇ ಅಂತ್ಯವಾಗಬಹುದು: ಸೌದಿ ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲಿಕಿ
Photo Credit : x
ರಿಯಾದ್, ನ.29: ಇರಾನ್ ಬೆಂಬಲಿತ ಹೂತಿಗಳು ವಿಶ್ವಸಂಸ್ಥೆಯ ಬೆಂಬಲಿತ ಶಾಂತಿ ಯೋಜನೆಯನ್ನು ಒಪ್ಪಿಕೊಂಡು ಯೆಮೆನ್ ಸರಕಾರದೊಂದಿಗೆ ಮಾತುಕತೆಗೆ ಮುಂದಾದರೆ, ದೇಶದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಯುದ್ಧ ನಾಳೆಯೇ ಕೊನೆಗೊಳ್ಳಬಹುದು. ಆದರೆ, ಹೂತಿಗಳನ್ನು ಮಾತುಕತೆಯ ಮೇಜಿಗೆ ಕರೆತರುವವರೆಗೆ ಸೌದಿ ನೇತೃತ್ವದ ಮೈತ್ರಿಕೂಟವು ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಲಿದೆ ಎಂದು ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲಿಕಿ ಹೇಳಿದ್ದಾರೆ.
‘ರಾಯಿಟರ್ಸ್’ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಲ್-ಮಲಿಕಿ, ಯೆಮೆನ್ ಸರಕಾರದ ಹಂಗಾಮಿ ರಾಜಧಾನಿಯಾಗಿರುವ ಏಡೆನ್ ನಗರದ ರಕ್ಷಣೆಗೆ ಸೌದಿ ಅರೆಬಿಯ ಸ್ಪಷ್ಟ ಮಿತಿ ವಿಧಿಸಿದೆ ಎಂದು ತಿಳಿಸಿದರು.
ಹೂತಿ ಹೋರಾಟಗಾರರು ನಗರದ ಮೇಲೆ ದಾಳಿ ನಡೆಸುವಷ್ಟು ಸಮೀಪಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಈ ಬಂದರು ನಗರವನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಮೈತ್ರಿಕೂಟ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಹೆಚ್ಚುತ್ತಿರುವ ಸಂಘರ್ಷವು ಇರಾನ್ ಯುದ್ಧದ ಅತ್ಯಂತ ತೀವ್ರವಾದ ಮುಂಚೂಣಿಯಾಗಿ ಮತ್ತೆ ಹೊರಹೊಮ್ಮಿದೆ. ಯೆಮೆನ್ ನಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಇದೇ ವೇಳೆ, ಸೌದಿ ಅರೆಬಿಯದ ರಾಜಧಾನಿ ರಿಯಾದ್ ನ ಕಚೇರಿ ಕಟ್ಟಡಗಳ ಸಮುಚ್ಚಯ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ವಾರಕ್ಕೊಮ್ಮೆ ದಾಳಿಗಳು ನಡೆಯುತ್ತಿವೆ.
ನಾಗರಿಕ ಮತ್ತು ಆರ್ಥಿಕ ಗುರಿಗಳ ಮೇಲೆ ಹೂತಿಗಳು ನಡೆಸುತ್ತಿರುವ ದಾಳಿಗಳು ಹಾಗೂ ಕೆಂಪು ಸಮುದ್ರದಲ್ಲಿ ಅಂತರರಾಷ್ಟ್ರೀಯ ಹಡಗು ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಸೌದಿ ಅರೆಬಿಯದ ಆರ್ಥಿಕ ಯೋಜನೆಗಳಿಗೆ ಸವಾಲಾಗಿದೆ. ವಿದೇಶಿ ಹೂಡಿಕೆ ಆಕರ್ಷಿಸುವುದು ಮತ್ತು ವರ್ಲ್ಡ್ ಎಕ್ಸ್ ಪೋ 2030ರಂತಹ ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವ ಸೌದಿ ಅರೆಬಿಯದ ಪ್ರಯತ್ನಗಳಿಗೂ ಈ ಬೆಳವಣಿಗೆಗಳು ಬೆದರಿಕೆ ಒಡ್ಡಿವೆ.
ಯುದ್ಧವನ್ನು ಮುಂದಿನ ವರ್ಷದವರೆಗೂ ವಿಸ್ತರಿಸಲು ಸೌದಿ ಅರೆಬಿಯ ಸಿದ್ಧತೆ ನಡೆಸುತ್ತಿದೆ ಎಂದು ಈ ತಿಂಗಳ ಆರಂಭದಲ್ಲಿ ರಾಯಿಟರ್ಸ್ ವರದಿ ಮಾಡಿತ್ತು.
ಹೂತಿಗಳ ನಿಯಂತ್ರಣದಲ್ಲಿರುವ ಸನಾ ನಗರವನ್ನು ವಶಪಡಿಸಿಕೊಂಡು, ಅಲ್ಲಿ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರವನ್ನು ಮರುಸ್ಥಾಪಿಸುವುದು ಸೌದಿ ಬೆಂಬಲಿತ ಯೆಮೆನ್ ಸರಕಾರದ ಆರಂಭಿಕ ಗುರಿಯಾಗಿತ್ತು. ಆದರೆ, ಆ ಗುರಿ ಈಡೇರಿಲ್ಲ. ಇದೀಗ ತನ್ನ ಹಂಗಾಮಿ ರಾಜಧಾನಿ ಏಡೆನ್ ನಗರವನ್ನು ರಕ್ಷಿಸಿಕೊಳ್ಳುವುದು ಮತ್ತು ತೈಝ್ ನಗರದ ಮೇಲಿನ ಹೂತಿಗಳ ಮುತ್ತಿಗೆಯನ್ನು ತಡೆಯುವುದು ಸರಕಾರದ ಪ್ರಮುಖ ಆದ್ಯತೆಗಳಾಗಿವೆ.
‘ರಾಜಕೀಯ ಪರಿಹಾರವೇ ಅತ್ಯುತ್ತಮ ಮಾರ್ಗ. ಆದರೆ, ತನ್ನ ಗುರಿ ಸಾಧಿಸಲು ಯೆಮೆನ್ ಸರಕಾರಕ್ಕೆ ನಾವು ಬೆಂಬಲ ನೀಡಬೇಕಿದೆ. ಹೂತಿಗಳು ಸರಕಾರದೊಂದಿಗೆ ಮಾರ್ಗಸೂಚಿಯ ಪ್ರಕಾರ ಮುಂದುವರಿಯಲು ನಿರ್ಧರಿಸಿದರೆ ಯುದ್ಧ ನಾಳೆಯೇ ಕೊನೆಗೊಳ್ಳಬಹುದು’ ಎಂದು ಅಲ್-ಮಲಿಕಿ ಹೇಳಿದರು.
ಅಲ್ಲಿಯವರೆಗೆ ಹೂತಿಗಳ ಮೇಲೆ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳುವ ಮತ್ತು ಅವರ ನಡವಳಿಕೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಮೈತ್ರಿಕೂಟವು ಮಿಲಿಟರಿ ಬಲವನ್ನು ಬಳಸಲಿದೆ. ಯೆಮೆನ್ ನೆಲದ ಪಡೆಗಳಿಗೆ ನಿರಂತರ 24 ಗಂಟೆಗಳ ನಿಕಟ ವಾಯು ಬೆಂಬಲ ಒದಗಿಸುವುದರ ಜತೆಗೆ, ಸೌದಿ ನಗರಗಳಿಗೆ ಬೆದರಿಕೆಯೊಡ್ಡುವ ಹೂತಿಗಳ ಸಾಮರ್ಥ್ಯವನ್ನು ಕುಗ್ಗಿಸುವ ಕಾರ್ಯಾಚರಣೆಯನ್ನೂ ಮುಂದುವರಿಸಲಿದೆ ಎಂದರು.
‘ಥಿಯೇಟರ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು (TBM), ಅವುಗಳ ಉಡಾವಣಾ ವ್ಯವಸ್ಥೆಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಡ್ರೋಣ್(UAV)ಗಳ ಕೆಲವು ಘಟಕಗಳನ್ನು ನಾಶಪಡಿಸುವ ಗುರಿಯಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ’ ಎಂದು ತಿಳಿಸಿದರು.
ಯೆಮೆನ್ ಸರಕಾರಕ್ಕೆ ನೀಡುತ್ತಿರುವ ಬೆಂಬಲವನ್ನು ಸೌದಿ ಅರೆಬಿಯ ಹಿಂತೆಗೆದುಕೊಳ್ಳಬೇಕು ಎಂದು ಹೂತಿಗಳು ಒತ್ತಾಯಿಸುತ್ತಿದ್ದಾರೆ. ಸೌದಿ ಅರೆಬಿಯವು ಯೆಮೆನ್ ಸರಕಾರಕ್ಕೆ ತರಬೇತಿ, ಶಸ್ತ್ರಾಸ್ತ್ರ ಮತ್ತು ಹಣಕಾಸಿನ ನೆರವು ನೀಡುತ್ತಿದೆ. ಅಲ್ಲದೆ, ಸರಕಾರದ ಕೆಲವು ಪ್ರತಿನಿಧಿಗಳಿಗೆ ರಿಯಾದ್ ನಲ್ಲಿ ಆಶ್ರಯ ನೀಡಿದೆ. ಇದರ ಜತೆಗೆ, ವಾಯು ಮತ್ತು ಸಮುದ್ರ ಬಂದರುಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕು ಹಾಗೂ ಹಣಕಾಸಿನ ಪರಿಹಾರ ನೀಡಬೇಕು ಎಂಬುದು ಹೂತಿಗಳ ಬೇಡಿಕೆಯಾಗಿದೆ.
ಹೂತಿಗಳು ಯೆಮೆನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಬಳಿಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸರಕಾರವನ್ನು ಮರುಸ್ಥಾಪಿಸುವ ಉದ್ದೇಶದಿಂದ ಸೌದಿ ಅರೆಬಿಯ 2015ರಲ್ಲಿ ಅರಬ್ ಮೈತ್ರಿಕೂಟದ ನೇತೃತ್ವದಲ್ಲಿ ಯೆಮೆನ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿತ್ತು.
ವರ್ಷಗಳ ಕಾಲ ನಡೆದ ರಕ್ತಸಿಕ್ತ ಸಂಘರ್ಷದ ಬಳಿಕ 2022ರಲ್ಲಿ ಕದನ ವಿರಾಮ ಜಾರಿಗೆ ಬಂದಿತ್ತು. ಈ ವರ್ಷದ ಆರಂಭದಲ್ಲಿ ಮತ್ತೆ ಹೋರಾಟ ಆರಂಭವಾಗುವವರೆಗೆ ಕದನ ವಿರಾಮ ಬಹುತೇಕ ಮುಂದುವರಿದಿತ್ತು.
ಕದನ ವಿರಾಮ ಮುರಿದ ಬಳಿಕ ಹೂತಿಗಳು ಬಾಬ್ ಅಲ್-ಮಂಡೇಬ್ ಜಲಸಂಧಿಯ ಸಮೀಪದ ಕೆಂಪು ಸಮುದ್ರದ ಕರಾವಳಿಯ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ತೈಝ್ ನಗರವನ್ನು ಸುತ್ತುವರಿದಿದ್ದಾರೆ. ಹೂತಿ ಪಡೆಗಳು ಇದೀಗ ಏಡೆನ್ ನಿಂದ ಸುಮಾರು 60 ಕಿ.ಮೀ. ದೂರದಲ್ಲಿವೆ.
ನವೆಂಬರ್ ನಲ್ಲಿ ಬಾಬ್ ಅಲ್-ಮಂಡೇಬ್ ಜಲಸಂಧಿಯ ಸುತ್ತಲಿನ ತಮ್ಮ ನೆಲೆಗಳಿಂದ ಹಿಂತೆಗೆದುಕೊಂಡು ಏಡೆನ್ ಗೆ ಪಡೆಗಳನ್ನು ಬಲಪಡಿಸಲು ಕಳುಹಿಸುವುದು ಸೇರಿದಂತೆ ಯೆಮೆನ್ ಸರಕಾರ ಇತ್ತೀಚೆಗೆ ಕೆಲವು ಹಿನ್ನಡೆಗಳನ್ನು ಅನುಭವಿಸಿದೆ. ಆದರೆ, ಯುದ್ಧದ ದಿಕ್ಕು ಬದಲಿಸಲು ಸೌದಿ ನೆಲದ ಪಡೆಗಳನ್ನು ಯೆಮೆನ್ ಗೆ ಕಳುಹಿಸುವ ಸಾಧ್ಯತೆಯನ್ನು ಅಲ್-ಮಲಿಕಿ ತಳ್ಳಿಹಾಕಿದರು.
‘ಹೊರಗಿನಿಂದ ಮತ್ತೊಂದು ಸೇನೆಯನ್ನು ಕರೆತರುವ ಅಗತ್ಯವಿಲ್ಲ’ ಎಂದ ಅವರು, ಯೆಮೆನ್ ಸರಕಾರಿ ಪಡೆಗಳಲ್ಲಿ ಸಾಕಷ್ಟು ಸಂಖ್ಯೆಯ ಸೈನಿಕರು, ಬುಡಕಟ್ಟು ಸಮುದಾಯಗಳ ಬೆಂಬಲ ಮತ್ತು ಅಗತ್ಯ ಮಿಲಿಟರಿ ಸಾಮರ್ಥ್ಯವಿದೆ ಎಂದು ಹೇಳಿದರು.
ಹೂತಿ ಬಂಡುಕೋರರು ಸೌದಿ ಅರೆಬಿಯದ ಭೂಪ್ರದೇಶಕ್ಕೆ ನುಸುಳುವುದನ್ನು ತಡೆಯಲು ಸೌದಿ ಪಡೆಗಳು ದಕ್ಷಿಣ ಗಡಿಯಲ್ಲಿ ನಿಯೋಜನೆಗೊಂಡಿವೆ. ಆದರೆ, ಪ್ರಸಕ್ತ ಸಂಘರ್ಷದ ಅವಧಿಯಲ್ಲಿ ಇಂತಹ ನುಸುಳುವಿಕೆ ಪ್ರಯತ್ನಗಳು ನಡೆದಿವೆಯೇ ಎಂಬುದನ್ನು ಅವರು ಖಚಿತಪಡಿಸಲಿಲ್ಲ.
‘ನಮ್ಮ ಗಡಿಯ ಸಮೀಪಕ್ಕೆ ಬರುವ ಯಾವುದೇ ಬೆದರಿಕೆಯನ್ನು ನಾಶಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು. ಯೆಮೆನ್ ಸೇನೆಯಲ್ಲಿನ ಆಂತರಿಕ ಸಮನ್ವಯದ ಸಮಸ್ಯೆಗಳನ್ನು ಪರಿಹರಿಸಲು ಮೈತ್ರಿಕೂಟದ ಪಡೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಕಳೆದ ಮೂರು ತಿಂಗಳಲ್ಲಿ ಯುದ್ಧಭೂಮಿಯಲ್ಲಿ ಎರಡು ಬಾರಿ ಕೆಲವು ಲೋಪಗಳು ಉಂಟಾಗಿರುವುದನ್ನು ಯೆಮೆನ್ ಸರಕಾರ ಒಪ್ಪಿಕೊಂಡಿದೆ. ಯೆಮೆನ್ ಸೇನೆಯು ಈ ಸಮಸ್ಯೆಗಳನ್ನು ಸರಿಪಡಿಸಿಕೊಂಡು, ಸಣ್ಣಪುಟ್ಟ ತಾಂತ್ರಿಕ ಹಾಗೂ ಇತರ ತಪ್ಪುಗಳನ್ನು ತಿದ್ದಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಅಲ್-ಮಲಿಕಿ ಹೇಳಿದರು.
►ಕ್ಷಿಪಣಿ ತಡೆಗಟ್ಟುವ ಸಾಧನಗಳ ಕೊರತೆಯಿಲ್ಲ
ಸೌದಿ ಅರೆಬಿಯದ ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಬಳಸುವ ಕ್ಷಿಪಣಿ ತಡೆಗಟ್ಟುವ ಸಾಧನಗಳ (Interceptors) ದಾಸ್ತಾನು ಖಾಲಿಯಾಗುತ್ತಿದೆ ಎಂಬ ವರದಿಗಳನ್ನು ಅಲ್-ಮಲಿಕಿ ತಳ್ಳಿಹಾಕಿದರು.
‘ನಾವು ನಮ್ಮ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದೇವೆ. ಇದು ಸರಕಾರಗಳ ನಡುವಿನ ಒಪ್ಪಂದಗಳ ಮೂಲಕ ನಡೆಯುತ್ತದೆ. ನಮ್ಮಲ್ಲಿ ಯಾವುದೇ ಕೊರತೆಯಿಲ್ಲ. ದೇಶವನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ನಮಗಿದೆ’ ಎಂದು ಅವರು ಹೇಳಿದರು.
ರಿಯಾದ್ ಮೂಲದ ‘ಗಲ್ಫ್ ರಿಸರ್ಚ್ ಸೆಂಟರ್’ ಚಿಂತಕರ ಚಾವಡಿಯ ಪ್ರಕಾರ, ಅಕ್ಟೋಬರ್ ವೇಳೆಗೆ ಸೌದಿ ಅರೆಬಿಯದ ಕ್ಷಿಪಣಿ ತಡೆಗಟ್ಟುವಿಕೆಯ ಪ್ರಮಾಣ ಶೇ. 92ಕ್ಕಿಂತ ಹೆಚ್ಚಿತ್ತು.
ಆದರೆ, ರಿಯಾದ್ ನ ವಾಣಿಜ್ಯ ಪ್ರದೇಶದಲ್ಲಿರುವ ಸೌದಿ ಅರೆಬಿಯದ ಸರಕಾರಿ ಹೂಡಿಕೆ ನಿಧಿಯ ಪ್ರಧಾನ ಕಚೇರಿಯಂತಹ ಪ್ರಮುಖ ಸ್ಥಳಗಳ ಮೇಲಿನ ದಾಳಿಗಳು, ಸೌದಿ ಅರೆಬಿಯವನ್ನು ಸುರಕ್ಷಿತ ಪ್ರಾದೇಶಿಕ ಕೇಂದ್ರವಾಗಿ ಬಿಂಬಿಸುವ ಪ್ರಯತ್ನಗಳಿಗೆ ಹಿನ್ನಡೆಯುಂಟುಮಾಡಿವೆ.
ದಶಕಗಳ ಕಾಲ ನೂರಾರು ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿ ಬಲಿಷ್ಠ ಸೇನೆಯನ್ನು ನಿರ್ಮಿಸಿರುವ ಸೌದಿ ಅರೆಬಿಯಕ್ಕೆ, ಯೆಮೆನ್ ನ ಪರ್ವತ ಪ್ರದೇಶಗಳಲ್ಲಿ ಸಣ್ಣ ಸಶಸ್ತ್ರ ಗುಂಪಾಗಿದ್ದ ಹೂತಿಗಳ ದಾಳಿಗಳನ್ನು ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ಅಲ್-ಮಲಿಕಿ ಪ್ರತಿಕ್ರಿಯಿಸಿದರು.
‘ಹೂತಿಗಳು ನಡೆಸುತ್ತಿರುವುದು ಯಾವುದೇ ಮಿಲಿಟರಿ ಕಾರ್ಯಾಚರಣೆಯಲ್ಲ. ಅವರು ನಾಗರಿಕರು ಮತ್ತು ನಾಗರಿಕ ಆಸ್ತಿಗಳ ಮೇಲೆ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇಂತಹ ಕೃತ್ಯಗಳನ್ನು ಯಾರಾದರೂ ಎಸಗಬಹುದು’ ಎಂದು ಅವರು ಹೇಳಿದರು.
‘ಸಶಸ್ತ್ರ ಸಂಘರ್ಷದ ನಿಯಮಗಳನ್ನು ಗೌರವಿಸದಿದ್ದರೆ, ಯಾರಾದರೂ ತಮಗೆ ಇಷ್ಟಬಂದಂತೆ ವರ್ತಿಸಬಹುದು. ನಾವು ಎದುರಿಸುತ್ತಿರುವ ಸವಾಲು ಏನೆಂದರೆ, ಒಂದು ಭಯೋತ್ಪಾದಕ ಗುಂಪಿನೊಂದಿಗೆ ವ್ಯವಹರಿಸುತ್ತಿದ್ದೇವೆ’ ಎಂದು ಅಲ್-ಮಲಿಕಿ ಅಭಿಪ್ರಾಯಪಟ್ಟರು.
ಸೌಜನ್ಯ: ರಾಯಿಟರ್ಸ್