ಗುಪ್ತಚರ ವ್ಯವಸ್ಥೆಯ ಪುನರ್ರಚನೆಗೆ ಇರಾನ್ ನ ಸರ್ವೋಚ್ಚ ನಾಯಕ ಆದೇಶ
ಮುಜ್ತಬಾ ಖಾಮಿನೈ - Photo Credit : PTI
ಟೆಹರಾನ್, ನ.29: ಇತ್ತೀಚಿನ ವರ್ಷಗಳಲ್ಲಿ ನಡೆದ ಹಲವು ಘಟನೆಗಳು ಇರಾನ್ ನ ಭದ್ರತೆ ಮತ್ತು ಗುಪ್ತಚರ ವ್ಯವಸ್ಥೆಯಲ್ಲಿನ ಪ್ರಮುಖ ಲೋಪದೋಷಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ, ದೇಶದ ಗುಪ್ತಚರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ರಚಿಸುವಂತೆ ಇರಾನ್ ನ ಸರ್ವೋಚ್ಚ ನಾಯಕ ಮುಜ್ತಬಾ ಖಾಮಿನೈ ಆದೇಶಿಸಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ತಿಳಿಸಿದ್ದಾರೆ.
ಸಂವಿಧಾನಾತ್ಮಕ ಕಾವಲು ಸಂಸ್ಥೆಯಾದ 'ಗಾರ್ಡಿಯನ್ ಕೌನ್ಸಿಲ್' ಪುನರ್ರಚನೆಗೆ ಸಂಬಂಧಿಸಿದ ಮಸೂದೆಯನ್ನು ಪರಿಶೀಲಿಸಿ ಅನುಮೋದಿಸಿದ ತಕ್ಷಣ ಸರಕಾರವು ಕಾಯಂ ಗುಪ್ತಚರ ಸಚಿವರನ್ನು ನೇಮಿಸಲು ವಿಳಂಬ ಮಾಡಬಾರದು ಎಂದು ಘಾಲಿಬಾಫ್ ರವಿವಾರ ಟೆಲಿಗ್ರಾಮ್ನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ಹೇಳಿದ್ದಾರೆ.
ಇರಾನ್ ನ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಅವರು ಈ ವರ್ಷದ ಮಾರ್ಚ್ 18ರಂದು ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತರಾಗಿದ್ದು, ಅವರ ಸ್ಥಾನಕ್ಕೆ ಇನ್ನೂ ಉತ್ತರಾಧಿಕಾರಿಯನ್ನು ನೇಮಿಸಲಾಗಿಲ್ಲ.
ಗುಪ್ತಚರ ಸಚಿವಾಲಯದ ಪುನರ್ರಚನೆ ಕುರಿತು ಮಸೂದೆ ಮಂಡಿಸುವಂತೆ ಇರಾನ್ ಸಂಸತ್ತು ಆರಂಭದಲ್ಲಿ ಸರಕಾರಕ್ಕೆ ಸೂಚಿಸಿತ್ತು. ಆದರೆ, ಸರಕಾರದಿಂದ ವಿಳಂಬವಾದ ಹಿನ್ನೆಲೆಯಲ್ಲಿ ಸಂಸತ್ತೇ ಈ ವಿಷಯವನ್ನು ಕೈಗೆತ್ತಿಕೊಂಡಿತು ಎಂದು ಘಾಲಿಬಾಫ್ ತಿಳಿಸಿದ್ದಾರೆ.
ಸಂಸತ್ ಸದಸ್ಯರು ರವಿವಾರ ಮಸೂದೆಯ ಸಾಮಾನ್ಯ ರೂಪುರೇಷೆಗಳಿಗೆ ಅನುಮೋದನೆ ನೀಡಿದ್ದು, ಗುಪ್ತಚರ ಸಚಿವ ಹುದ್ದೆಯ ಅರ್ಹತಾ ಮಾನದಂಡಗಳನ್ನು ವಿಸ್ತರಿಸುವುದು ಸೇರಿದಂತೆ ವಿವಿಧ ನಿಯಮಗಳ ಕುರಿತು ಪರಿಶೀಲನೆ ಆರಂಭಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಧರ್ಮಗುರುಗಳಲ್ಲದವರೂ (ಮೌಲ್ವಿಗಳಲ್ಲದವರೂ) ಗುಪ್ತಚರ ಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಮಸೂದೆಯ ಪ್ರಸ್ತಾವನೆಗೆ ಇರಾನ್ ಸಂಸತ್ತು ರವಿವಾರ ಅನುಮೋದನೆ ನೀಡಿದೆ. ಈ ಹುದ್ದೆಗೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಮತ್ತು ಆಡಳಿತಾತ್ಮಕ ಅನುಭವದ ಮಾನದಂಡಗಳನ್ನೂ ಮಸೂದೆ ಒಳಗೊಂಡಿದೆ.