Isreal | ಏಕತಾ ಸರಕಾರ ರಚಿಸುವ ನಿಟ್ಟಿನಲ್ಲಿ ಮಾತುಕತೆ; ಐಸೆನ್ ಕೋಟ್ ಗೆ ಪ್ರಧಾನಿ ಹುದ್ದೆಯ ಪ್ರಸ್ತಾಪ ಮುಂದಿಟ್ಟ ನೆತನ್ಯಾಹು
ಬೆಂಜಮಿನ್ ನೆತನ್ಯಾಹು , ಗಾಡಿ ಐಸೆನ್‍ಕೋಟ್ | Photo Credit : AP
ಜೆರುಸಲೇಮ್, ನ. 29: ಆವರ್ತಕ ಪ್ರಧಾನಿ ಹುದ್ದೆಯ ವ್ಯವಸ್ಥೆಯಡಿ ಏಕತಾ ಸರಕಾರ ರಚಿಸಲು ಇಸ್ರೇಲ್ ನ ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಸ್ತಾಪ ಮುಂದಿಟ್ಟ ಬೆನ್ನಲ್ಲೇ, ಅವರು ತಮ್ಮ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿ ಗಾಡಿ ಐಸೆನ್ ಕೋಟ್ ಅವರನ್ನು ರವಿವಾರ ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.
ಇಬ್ಬರೂ ನಾಯಕರು ತಮ್ಮ ನಡುವಿನ ಪ್ರಮುಖ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಮಾತುಕತೆಯು ವ್ಯವಹಾರಿಕವಾಗಿತ್ತು ಎಂದು ಸಭೆಯ ನಂತರ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಟೆಲ್ ಅವೀವ್ ನ ಇಸ್ರೇಲಿ ಸೇನಾ ಪ್ರಧಾನ ಕಚೇರಿಯಲ್ಲಿ ಈ ಸಭೆ ನಡೆದಿದೆ.
ಸರಕಾರ ರಚಿಸುವಂತೆ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಂದ ಆಹ್ವಾನಿಸಲ್ಪಟ್ಟಿರುವ ಐಸೆನ್ ಕೋಟ್ ಅವರಿಗೆ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲು ಡಿ. 6ರವರೆಗೆ ಕಾಲಾವಕಾಶವಿದೆ. ಒಮ್ಮೆ 14 ದಿನಗಳ ಕಾಲಾವಕಾಶ ವಿಸ್ತರಣೆಗೆ ಕೋರುವ ಆಯ್ಕೆಯಿದ್ದರೂ, ತಾವು ಹೆಚ್ಚಿನ ಸಮಯ ಕೇಳುವುದಿಲ್ಲ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ತಮ್ಮ ಪಕ್ಷ ಲಿಕುಡ್ ಮತ್ತು ಐಸೆನ್ ಕೋಟ್ ಅವರ `ಯಶಾರ್' ಪಕ್ಷದ ನಡುವಿನ ಅಧಿಕಾರ ಹಂಚಿಕೆ ಒಪ್ಪಂದದಡಿ ಐಸೆನ್ ಕೋಟ್ ಮೊದಲು ಪ್ರಧಾನಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡುವುದಾಗಿ ನೆತನ್ಯಾಹು ಪ್ರಸ್ತಾಪಿಸಿದ್ದಾರೆ. ಸಂಸತ್ತಿನಲ್ಲಿ ಅತಿ ದೊಡ್ಡ ಪಕ್ಷವಾಗಿರುವುದರಿಂದ ಲಿಕುಡ್ ಸಾಮಾನ್ಯವಾಗಿ ಏಕತಾ ಸರಕಾರವನ್ನು ಮುನ್ನಡೆಸಬೇಕು. ಆದರೆ, ಇಸ್ರೇಲ್ ಎದುರಿಸುತ್ತಿರುವ ಭದ್ರತಾ ಬೆದರಿಕೆಗಳ ಹಿನ್ನೆಲೆಯಲ್ಲಿ ಈ ತತ್ವವನ್ನು ಬದಿಗಿಡಲು ತಾವು ಸಿದ್ಧರಿರುವುದಾಗಿ ಅವರು ಹೇಳಿದ್ದಾರೆ.
ಮಾತುಕತೆಯ ಸಾಧ್ಯತೆಯನ್ನು ಸ್ವಾಗತಿಸಿದ ಐಸೆನ್ ಕೋಟ್, ರಾಜಿ ಮಾಡಿಕೊಳ್ಳುವ ನೆತನ್ಯಾಹು ಅವರ ಇಚ್ಛಾಶಕ್ತಿಯನ್ನು ಪ್ರಶ್ನಿಸಿದ್ದಾರೆ. ನಿಜವಾದ ಏಕತೆಗೆ ಲಿಕುಡ್ ಸಿದ್ಧವಿದ್ದರೆ, ಮುಂದಿನ 24 ಗಂಟೆಗಳಲ್ಲಿ ಆ ಪಕ್ಷದ ಗಂಭೀರತೆಯನ್ನು ಪರಿಶೀಲಿಸಲು ತಾನು ಸಿದ್ಧನಿದ್ದೇನೆ ಎಂದು ಐಸೆನ್ ಕೋಟ್ ರವಿವಾರ ಹೇಳಿದ್ದಾರೆ.
ಮತ್ತೊಂದು ಚುನಾವಣೆಗೆ ದಾರಿ ಮಾಡಿಕೊಡುವ ಉದ್ದೇಶದಿಂದ ನೆತನ್ಯಾಹು ಉದ್ದೇಶಪೂರ್ವಕವಾಗಿ ಮಾತುಕತೆಗಳನ್ನು ವಿಳಂಬಗೊಳಿಸುತ್ತಿದ್ದಾರೆ. ಇದರಿಂದ ತಾವು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಬಹುದು ಎಂಬುದು ಅವರ ಯೋಜನೆಯಾಗಿದೆ ಎಂದು ಮಾಜಿ ಸೇನಾ ಮುಖ್ಯಸ್ಥರೂ ಆಗಿರುವ ಐಸೆನ್ ಕೋಟ್ ಶುಕ್ರವಾರ ಆರೋಪಿಸಿದ್ದರು.