×
Ad

ಹೊಸ ಅಧ್ಯಕ್ಷರ ಆಯ್ಕೆಗೆ ದ್ವೀಪರಾಷ್ಟ್ರ ಶ್ರೀಲಂಕಾ ಸಜ್ಜು

Update: 2024-09-18 08:47 IST

 ರನಿಲ್ ವಿಕ್ರಮಸಿಂಘೆ  PC: facebook.com/ranil.wickremesinghe

ಕೊಲಂಬೊ: ಆರ್ಥಿಕ ಸಂಕಷ್ಟದಿಂದ ಜರ್ಜರಿತವಾಗಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಈ ತಿಂಗಳ 21ರಂದು ಚುನಾವಣೆ ನಡೆಯಲಿದೆ. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (ಯುನೈಟೆಡ್ ನ್ಯಾಷನಲ್ ಪಾರ್ಟಿ), ಅರುಣ ಕುಮಾರ ದಿಸ್ಸೆನಾಯಕೆ (ನ್ಯಾಷನಲ್ ಪೀಪಲ್ಸ್ ಪವರ್) ಮತ್ತು ವಿರೋಧ ಪಕ್ಷದ ನಾಯಕ ಸಜೀತ್ ಪ್ರೇಮದಾಸ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

"ಸದ್ಯಕ್ಕೆ ಮುಂಚೂಣಿಯಲ್ಲಿ ಯಾರಿದ್ದಾರೆ ಎಂದು ಹೇಳುವುದು ಕಷ್ಟ. ಆಡಳಿತ ವಿರೋಧಿ ಭಾವನೆಗಳ ಹೊರತಾಗಿಯೂ ರನಿಲ್ ವಿಕ್ರಮಸಿಂಘೆ ಮುನ್ನಡೆ ಪಡೆಯುವ ಎಲ್ಲ ಸಾಧ್ಯತೆಗಳಿವೆ. ಇತರ ಇಬ್ಬರು ಕೂಡಾ ಅನುಕೂಲಕರ ವಾತಾವರಣ ಹೊಂದಿದ್ದಾರೆ" ಎಂದು ಮೂಲಗಳು ಹೇಳಿವೆ.

ಹಿರಿಯ ಬುದ್ಧಭಿಕ್ಷು ದೊಡಂಪಹಲ ರಾಹುಲ ಥೆರೋ ಅವರು ಹಾಲಿ ಅಧ್ಯಕ್ಷ ರನೀಲ್ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಜತೆಗೆ ಮಾಜಿ ಅಧ್ಯಕ್ಷ ಮಹೀಂದಾ ರಾಜಪಕ್ಸೆಯವರ ಪುತ್ರ ನಮಲ್ ರಾಜಪಕ್ಸೆ ಕಣದಿಂದ ಹಿಂದಕ್ಕೆ ಸರಿಯುವಂತೆಯೂ ಆಗ್ರಹಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿನ ಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ವಿಕ್ರಮ ಸಿಂಘೆ ಮರು ಆಯ್ಕೆಯ ಕನಸು ಕಾಣುತ್ತಿದ್ದಾರೆ. ಸ್ಥಳೀಯರು ಇದೀಗ ಅಗತ್ಯ ವಸ್ತುಗಳಿಗೆ ಪರದಾಡುವ ಸ್ಥಿತಿ ಇಲ್ಲ. ದಾಖಲೆಮಟ್ಟದ ಪ್ರವಾಸಿಗಳು ಆಗಮಿಸುತ್ತಿದ್ದು, ಹೊರದೇಶಗಳಲ್ಲಿ ಉದ್ಯೋಗದಲ್ಲಿರುವ ಶ್ರೀಲಂಕಾ ಪ್ರಜೆಗಳಿಂದ ಸ್ವೀಕೃತಿ ಹೆಚ್ಚುತ್ತಿದೆ.

ಆದರೆ ಹಲವು ಮಂದಿ ಈ ದ್ವೀಪರಾಷ್ಟ್ರಕ್ಕೆ ಬದಲಾವಣೆಯ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಾರೆ. "ಅರುಣ ಕುಮಾರ ದಿಸ್ಸೆನಾಯಕ ಒಳ್ಳೆಯ ಆಯ್ಕೆ ಎನ್ನುವುದು ನನ್ನ ಭಾವನೆ. ಅವರು ಬದಲಾವಣೆಗಳನ್ನು ತರುವ ನಿರೀಕ್ಷೆ ಇದೆ" ಎಂದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಿತ್ ಜೆ ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News