×
Ad

ಫೆಲೆಸ್ತೀನಿಯನ್ ಜನರಿಗೆ ರಕ್ಷಣೆಯನ್ನು ಒದಗಿಸಲು ಅಂತರಾಷ್ಟ್ರೀಯ ಸಮುದಾಯದ ಮಧ್ಯಪ್ರವೇಶಕ್ಕೆ ಒಐಸಿ ಆಗ್ರಹ

Update: 2023-08-07 23:03 IST

 ಸಾಂದರ್ಭಿಕ ಚಿತ್ರ- PTI

ರಿಯಾದ್: ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಇಸ್ರೇಲ್ ನಡೆಸುತ್ತಿರುವ ನಿರಂತರ ಅಪರಾಧಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ(ಐಒಸಿ) ಸೋಮವಾರ ಆಗ್ರಹಿಸಿದೆ.

ರವಿವಾರ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಸೇನೆಯ ಗುಂಡೇಟಿಗೆ ಮೂವರು ಫೆಲೆಸ್ತೀನೀಯರು ಬಲಿಯಾಗಿರುವ ಘಟನೆಯನ್ನು ಖಂಡಿಸಿರುವ ಐಒಸಿ `ಫೆಲೆಸ್ತೀನಿಯನ್ ಪ್ರಜೆಗಳು, ಅವರ ಭೂಮಿ ಮತ್ತು ಆಸ್ತಿಯ ವಿರುದ್ಧ ಉಗ್ರಗಾಮಿ ಇಸ್ರೇಲಿ ವಸಾಹತು ಗ್ಯಾಂಗ್ಗಳು ನಡೆಸುತ್ತಿರುವ ಸಂಘಟಿತ ಭಯೋತ್ಪಾದನೆಯ ಉಲ್ಬಣವು ಸಾವಿರಾರು ಅಮಾಯಕರ ಸಾವಿಗೆ ಕಾರಣವಾಗಿದೆ. ಆಕ್ರಮಿತ ಫೆಲೆಸ್ತೀನ್ ಭೂಪ್ರದೇಶದಲ್ಲಿ ಇಸ್ರೇಲ್ನ ನಿರಂತರ ಅಪರಾಧಗಳನ್ನು ನಿಲ್ಲಿಸಲು, ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಫೆಲೆಸ್ತೀನಿಯನ್ ಜನರಿಗೆ ರಕ್ಷಣೆಯನ್ನು ಒದಗಿಸಲು ಅಂತರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು' ಎಂದು ಆಗ್ರಹಿಸಿದೆ.

ಈ ಮಧ್ಯೆ, ರವಿವಾರ ತಡರಾತ್ರಿ ಪಶ್ಚಿಮದಂಡೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ತನ್ನ ಸೇನೆಯು 17 ಫೆಲೆಸ್ತೀನೀಯರನ್ನು ಬಂಧಿಸಿದೆ ಎಂದು ಇಸ್ರೇಲ್ ಸೋಮವಾರ ಘೋಷಿಸಿದೆ. ಬಂಧಿತರಲ್ಲಿ ಐವರು ಶುಕ್ರವಾರ ಇಸ್ರೇಲ್ ಸೇನೆಯ ಜತೆ ಸಂಘರ್ಷ ನಡೆಸಿದ್ದ ಸಂಘಟನೆಯ ಸದಸ್ಯರೆಂದು ಶಂಕಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಇಸ್ರೇಲ್ ನ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News