ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತ ಉತ್ತೇಜನ ನೀಡುತ್ತಿದೆ: ಅಮೆರಿಕ ಆರೋಪ
ಉಕ್ರೇನ್‌ನಲ್ಲಿ ನಡೆಯುತ್ತಿರುವುದು “ಮೋದಿ ಯುದ್ಧ” ಎಂದ ಟ್ರಂಪ್ ಆಪ್ತ
ಪೀಟರ್ ನವರೊ (Photo credit: AP)
ವಾಷಿಂಗ್ಟನ್ : ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತ ಉತ್ತೇಜನ ನೀಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಹಾಗೂ ಶ್ವೇತಭವನದ ಸಲಹೆಗಾರ ಪೀಟರ್ ನವರೊ ಹೇಳಿದ್ದಾರೆ.
Bloomberg ಸಂದರ್ಶನದಲ್ಲಿ ಮಾತನಾಡಿದ ಪೀಟರ್ ನವರೊ, ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದರೆ ಭಾರತಕ್ಕೆ ಅಮೆರಿಕದ ಸುಂಕದಲ್ಲಿ 25% ಕಡಿತ ದೊರೆಯುತ್ತದೆ ಎಂದು ಹೇಳಿದರು.
ನನ್ನ ಪ್ರಕಾರ, ಶಾಂತಿ ಮಾರ್ಗವು ಭಾಗಶಃ ಭಾರತದ ಮೂಲಕವೇ ಸಾಗುತ್ತದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವುದು ಮೋದಿ ಯುದ್ಧವೆಂದು ಹೇಳುತ್ತೇನೆ. ಭಾರತವು ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ರಷ್ಯಾಗೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡಿದರೆ ಭಾರತ 25% ರಿಯಾಯಿತಿ ಪಡೆಯಬಹುದು. ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ನೀವು ಪ್ರಜಾಪ್ರಭುತ್ವ ರಾಷ್ಟ್ರಗಳೊಂದಿಗೆ ಸೇರುವ ಬದಲು, ಸರ್ವಾಧಿಕಾರಿಗಳೊಂದಿಗೆ ಕೈಜೋಡಿಸುತ್ತಿದ್ದೀರಿ ಎಂದು ನವಾರೊ ಹೇಳಿದರು.
ಭಾರತ ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ನಿರಂತರವಾಗಿ ಖರೀದಿಸುತ್ತಿರುವುದಕ್ಕೆ ಭಾರತದ ಮೇಲೆ ಟ್ರಂಪ್ ಶೇ. 50ರಷ್ಟು ಸುಂಕ ವಿಧಿಸಿದ್ದಾರೆ. ಇದು ಬುಧವಾರದಿಂದಲೇ ಜಾರಿಗೆ ಬಂದಿದೆ.