ಗಾಝಾ ಯುದ್ಧ ವಿಸ್ತರಣೆ ವಿರೋಧಿಸಿ ಇಸ್ರೇಲ್‌ನಲ್ಲಿ ಬೃಹತ್ ಪ್ರತಿಭಟನೆ
ಪ್ರಧಾನಿ ನೆತನ್ಯಾಹು ಪ್ರಸ್ತಾವನೆಗೆ ಖಂಡನೆ
PC | PTI
ಜೆರುಸಲೇಂ, ಆ.10: ಗಾಝಾದಲ್ಲಿನ ಯುದ್ಧವನ್ನು ವಿಸ್ತರಿಸುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಯೋಜನೆಯನ್ನು ವಿರೋಧಿಸಿ ಹಾಗೂ ಯುದ್ಧವನ್ನು ಕೊನೆಗೊಳಿಸುವಂತೆ ಆಗ್ರಹಿಸಿ ಇಸ್ರೇಲ್‌ನ ಟೆಲ್ಅವೀವ್ ನಗರದಲ್ಲಿ ಶನಿವಾರ ರಾತ್ರಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.
ಇಸ್ರೇಲ್‌ನಾದ್ಯಂತ ಪ್ರತಿಭಟನೆ ನಡೆದಿದೆ. ಟೆಲ್ ಅವೀವ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಗಾಝಾದಲ್ಲಿ ಈಗಲೂ ಒತ್ತೆಸೆರೆಯಲ್ಲಿ ಇರುವವರ ಸುರಕ್ಷಿತ ಬಿಡುಗಡೆಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿರುವುದಾಗಿ ಪ್ರತಿಭಟನೆಯ ಸಂಘಟಕರು ಹೇಳಿದ್ದಾರೆ.
ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆ ತೀವ್ರಗೊಳಿಸಲು ಮತ್ತು ಗಾಝಾ ನಗರವನ್ನು ಸ್ವಾಧೀನಪಡಿಸಿಕೊಳ್ಳಲು ಇಸ್ರೇಲ್‌ನ ಭದ್ರತಾ ಸಚಿವ ಸಂಪುಟ ನಿರ್ಧರಿಸಿದೆ ಎಂದು ಪ್ರಧಾನಿ ನೆತನ್ಯಾಹು ಅವರ ಕಚೇರಿ ಶುಕ್ರವಾರ ಹೇಳಿಕೆ ನೀಡಿತ್ತು. ಇದನ್ನು ವಿರೋಧಿಸಿದ ಪ್ರತಿಭಟನಾಕಾರರು, ಗಾಝಾದಲ್ಲಿ ಕಾರ್ಯಾಚರಣೆ ವಿಸ್ತರಿಸುವುದರಿಂದ ಒತ್ತೆಯಾಳುಗಳಿಗೆ ಅಪಾಯವಾಗಬಹುದು. ಇದು ಮಿಲಿಟರಿಯ ನಿರ್ಧಾರವಲ್ಲ, ನಮ್ಮ ಪ್ರೀತಿಪಾತ್ರರಿಗೆ ಮರಣದಂಡನೆಯಾಗಿರಬಹುದು ಎಂದು ಎಚ್ಚರಿಕೆ ನೀಡಿದ್ದು ಯುದ್ಧವನ್ನು ತಕ್ಷಣವೇ ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಆಗ್ರಹಿಸಿದ್ದಾರೆ. ಟೆಲ್ಅವೀವ್‌ನ ಅಯಲಾನ್ ಹೆದ್ದಾರಿಯಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿ ವಾಹನ ಸಂಚಾರವನ್ನು ತಡೆಹಿಡಿದರು. ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ ಆರೋಪದಲ್ಲಿ ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇಸ್ರೇಲ್‌ನಲ್ಲಿ ಹೆಚ್ಚಿನವರು ತಕ್ಷಣವೇ ಯುದ್ಧ ಕೊನೆಗೊಳ್ಳುವುದನ್ನು ಬೆಂಬಲಿಸುತ್ತಿದ್ದಾರೆ ಎಂಬುದು ಇತ್ತೀಚೆಗೆ ನಡೆದ ಸಾರ್ವಜನಿಕ ಅಭಿಪ್ರಾಯ ಸಂಗ್ರಹದಲ್ಲಿ ಸ್ಪಷ್ಟವಾಗಿದೆ. ಗಾಝಾದಲ್ಲಿ ಇನ್ನೂ ಸುಮಾರು 20 ಒತ್ತೆಯಾಳುಗಳು ಜೀವಂತ ಇರುವುದಾಗಿ ಇಸ್ರೇಲ್ ಅಧಿಕಾರಿಗಳು ನಂಬಿದ್ದಾರೆ. ಈ ಮಧ್ಯೆ, ಗಾಝಾವನ್ನು ಸಂಪೂರ್ಣ ಸ್ವಾಧೀನಪಡಿಸಿಕೊಳ್ಳುವುದು `ಬಲೆಯೊಳಗೆ ಕಾಲಿಡುವುದಕ್ಕೆ ಸಮವಾಗಬಹುದು' ಎಂದು ಇಸ್ರೇಲ್ ಸೇನೆಯ ಮುಖ್ಯಸ್ಥ ಲೆ|ಜ| ಇಯಾಲ್ ಝಾಮಿರ್ ಅವರು ಪ್ರಧಾನಿ ನೆತನ್ಯಾಹುಗೆ ಎಚ್ಚರಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.