×
Ad

ಫ್ರಾನ್ಸ್ ನಲ್ಲಿ ಪ್ರವಾಹ | ಮೂವರು ಮೃತ್ಯು; 3 ಮಂದಿ ನಾಪತ್ತೆ

Update: 2024-03-11 21:57 IST

Photo : NDTV

ಪ್ಯಾರಿಸ್: ಆಗ್ನೇಯ ಫ್ರಾನ್ಸ್‍ನಲ್ಲಿ ಸುಂಟರ ಗಾಳಿಯೊಂದಿಗೆ ಸುರಿದ ಭಾರೀ ಮಳೆಯಿಂದ ಹಲವೆಡೆ ಪ್ರವಾಹ ಉಂಟಾಗಿದ್ದು ಕನಿಷ್ಟ ಮೂವರು ಮೃತಪಟ್ಟಿದ್ದಾರೆ. ನಾಪತ್ತೆಯಾಗಿರುವ ಇಬ್ಬರು ಮಕ್ಕಳ ಸಹಿತ 3 ಮಂದಿಯ ಪತ್ತೆಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ನೈಮ್ಸ್ ಪ್ರಾಂತದ ಬಳಿಯ ಗಾರ್ಡನ್ ನದಿ ಉಕ್ಕಿ ಹರಿಯುತ್ತಿದ್ದು ಜಲಾವೃತಗೊಂಡಿದ್ದ ಸೇತುವೆಯನ್ನು ದಾಟಲು ಪ್ರಯತ್ನಿಸಿದ ಕಾರೊಂದು ನೆರೆಯಲ್ಲಿ ಕೊಚ್ಚಿ ಹೋಗಿದೆ. ಕಾರಿನಲ್ಲಿದ್ದ 4 ಮತ್ತು 13 ವರ್ಷದ ಇಬ್ಬರು ಮಕ್ಕಳ ಸಹಿತ 4 ಮಂದಿ ನಾಪತ್ತೆಯಾಗಿದ್ದರು. ಬಳಿಕ ರಕ್ಷಣಾ ತಂಡ ಜೀವರಕ್ಷಕ ಬೋಟ್‍ನ ಮೂಲಕ ನದಿಯಲ್ಲಿ ಹುಡುಕಾಟ ನಡೆಸಿ ಮಹಿಳೆಯನ್ನು ರಕ್ಷಿಸಿದೆ. ಉಳಿದವರ ಪತ್ತೆಕಾರ್ಯ ಮುಂದುವರಿದಿದೆ. ಸೇತುವೆ ದಾಟುವುದು ಅಪಾಯಕಾರಿ ಎಂದು ಪೊಲೀಸರು ನೀಡಿದ ಸಲಹೆಯನ್ನು ಈ ಕುಟುಂಬದವರು ನಿರಾಕರಿಸಿದ್ದರು ಎಂದು ವರದಿಯಾಗಿದೆ.

ಸಮೀಪದ ಗ್ಯಾಗ್ನಿರೆಸ್ ನಗರದಲ್ಲಿ ಇಬ್ಬರು ಬೆಲ್ಜಿಯಂ ಪ್ರಯಾಣಿಕರಿದ್ದ ಮತ್ತೊಂದು ಕಾರು ನೆರೆನೀರಲ್ಲಿ ಕೊಚ್ಚಿಹೋಗಿದ್ದು ಓರ್ವನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಮತ್ತೊಬ್ಬನನ್ನು ರಕ್ಷಿಸಲಾಗಿದೆ. ಜಲಾವೃತಗೊಂಡ ಪ್ರದೇಶದಲ್ಲಿನ ಜನರನ್ನು ಸ್ಥಳಾಂತರಿಸಲು 300ಕ್ಕೂ ಅಧಿಕ ರಕ್ಷಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಗ್ವಾಡ್ರಾಗ್ ನಗರದಲ್ಲಿ ನೀರಿನಲ್ಲಿ ಮುಳುಗಿದ್ದ ಕಾರಿನಲ್ಲಿ ಇಬ್ಬರು ಮಹಿಳೆಯರ ಮೃತದೇಹ ಪತ್ತೆಯಾಗಿದೆ. ಇದೇ ಪ್ರಾಂತದಲ್ಲಿನ ಸೈಂಟ್ ಮಾರ್ಟಿನ್ ಡೆವಲಾಮಾಸ್ ನಗರದಲ್ಲಿ ಜಲವಿದ್ಯುತ್ ಸ್ಥಾವರದ ವ್ಯವಸ್ಥಾಪಕನೊಬ್ಬ ಶನಿವಾರ ಸಂಜೆಯಿಂದ ನಾಪತ್ತೆಯಾಗಿದ್ದಾನೆ. ನದಿಯಲ್ಲಿ ನೀರಿನ ರಭಸ ಹೆಚ್ಚಿದ್ದರಿಂದ ರವಿವಾರ ರಾತ್ರಿ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಂತರಿಕ ಸಚಿವ ಗೆರಾಲ್ಡ್ ಡರ್ಮಾನಿಯನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News