ಇಸ್ರೇಲ್‌ನಿಂದ ಫೆಲೆಸ್ತೀನಿ ನಾಗರಿಕರ 'ನರಮೇಧ' ಖಂಡಿಸಿ ವಿಶ್ವ ಸಂಸ್ಥೆಯ ಅಧಿಕಾರಿ ರಾಜೀನಾಮೆ
Photo: PTI
ನ್ಯೂಯಾರ್ಕ್: ಗಾಝಾದಲ್ಲಿರುವ ಫೆಲೆಸ್ತೀನಿ ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ನರಮೇಧಕ್ಕೆ ಸಮನಾಗಿದ್ದರೂ ಅದನ್ನು ತಡೆಯುವಲ್ಲಿ ವಿಶ್ವ ಸಂಸ್ಥೆಯು ವಿಫಲವಾಗಿದೆ ಎಂದು ಹೇಳಿ ಮಾನವ ಹಕ್ಕುಗಳಿಗಾಗಿನ ವಿಶ್ವ ಸಂಸ್ಥೆಯ ಹೈಕಮಿಷನರ್ ಅವರ ನ್ಯೂಯಾರ್ಕ್ ಕಚೇರಿಯ ನಿರ್ದೇಶಕರಾಗಿರುವ ಕ್ರೈಗ್ ಮೊಖಿಬರ್ ಅವರು ರಾಜೀನಾಮೆ ನೀಡಿದ್ದಾರೆ.
ಗಾಝಾದ ಮೇಲೆ ಇಸ್ರೇಲ್ ದಾಳಿಯಿಂದ ಅಪಾರ ಸಾವುನೋವು ಸಂಭವಿಸಿದರೂ ಅಮೆರಿಕ, ಇಂಗ್ಲೆಂಡ್ ಹಾಗೂ ಯುರೋಪ್‌ನ ಹೆಚ್ಚಿನ ದೇಶಗಳು ಈ “ಬರ್ಬರ ದೌರ್ಜನ್ಯಕ್ಕೆ ಬೆಂಬಲವಾಗಿ ನಿಂತಿವೆ,” ಎಂದೂ ಅವರು ಆರೋಪಿಸಿದ್ದಾರೆ.
ಅಕ್ಟೋಬರ್ 28ರಂದು ಜಿನೀವಾದಲ್ಲಿರುವ ವಿಶ್ವ ಸಂಸ್ಥೆಯ ಹೈಕಮಿಷನರ್ ಅವರಿಗೆ ಕ್ರೈಗ್ ಪತ್ರ ಬರೆದು ಇದು ನಿಮಗೆ ನನ್ನ ಕೊನೆಯ ಪತ್ರ ಎಂದೂ ಹೇಳಿಕೊಂಡಿದ್ದಾರೆ.
“ಮತ್ತೊಮ್ಮೆ ನಮ್ಮ ಕಣ್ಣೆದುರಿಗೆ ನರಮೇಧವನ್ನು ನಾವು ನೋಡುತ್ತಿದ್ದೇವೆ ಹಾಗೂ ನಾವು ಸೇವೆ ಸಲ್ಲಿಸುವ ಸಂಸ್ಥೆಯು ಅದನ್ನು ನಿಲ್ಲಿಸಲು ಯಾವುದೇ ಅಧಿಕಾರ ಹೊಂದಿಲ್ಲದಂತೆ ತೋರುತ್ತಿದೆ,” ಎಂದು ತಮ್ಮ ನಿವೃತ್ತಿಯ ಅಂಚಿನಲ್ಲಿರುವ ಕ್ರೈಗ್ ಹೇಳಿದ್ದಾರೆ.
ಆದರೆ ಅವರು ತಮ್ಮ ಪತ್ರದಲ್ಲಿ ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಉಲ್ಲೇಖವಿಲ್ಲ.
ಕ್ರೈಗ್ ಅವರು ವಿಶ್ವ ಸಂಸ್ಥೆಯಲ್ಲಿ 1992ರಿಂದ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ವಿಷಯದಲ್ಲಿ ತಜ್ಞರಾಗಿರುವ ಕ್ರೈಗ್ ವಕೀಲರಾಗಿದ್ದು 90ರ ದಶಕದಲ್ಲಿ ಗಾಝಾದಲ್ಲಿ ವಾಸಿಸುತ್ತಿದ್ದರು.