×
Ad

ಫೆಲೆಸ್ತೀನೀಯರ ವರ್ಗಾವಣೆ: ಟ್ರಂಪ್ ಕರೆಗೆ ಅರಬ್ ವಿದೇಶಾಂಗ ಸಚಿವರ ತಿರಸ್ಕಾರ

Update: 2025-02-01 22:14 IST

ಡೊನಾಲ್ಡ್ ಟ್ರಂಪ್ PC | PTI

ಕೈರೋ : ಫೆಲೆಸ್ತೀನೀಯರನ್ನು ಯಾವುದೇ ಸಂದರ್ಭದಲ್ಲಿ ಅವರ ನೆಲದಿಂದ ವರ್ಗಾಯಿಸುವುದನ್ನು ಒಪ್ಪಲಾಗದು ಎಂದು ಅರಬ್ ವಿದೇಶಾಂಗ ಸಚಿವರು ಶನಿವಾರ ಹೇಳಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕರೆಯನ್ನು ತಿರಸ್ಕರಿಸಿದ್ದಾರೆ.

ಗಾಝಾ ಪಟ್ಟಿಯ ನಿವಾಸಿಗಳನ್ನು ಸ್ವೀಕರಿಸುವಂತೆ ಟ್ರಂಪ್ ಈಜಿಪ್ಟ್ ಮತ್ತು ಜೋರ್ಡನ್‍ಗೆ ಕರೆ ನೀಡಿದ್ದರು. ಈಜಿಪ್ಟ್ ರಾಜಧಾನಿ ಕೈರೋದಲ್ಲಿ ನಡೆದ ಸಭೆಯ ಬಳಿಕ ಈಜಿಪ್ಟ್, ಜೋರ್ಡಾನ್, ಸೌದಿ ಅರೆಬಿಯಾ, ಖತರ್, ಯುಎಇ, ಫೆಲೆಸ್ತೀನಿಯನ್ ಪ್ರಾಧಿಕಾರ ಮತ್ತು ಅರಬ್‍ಲೀಗ್‍ನ ವಿದೇಶಾಂಗ ಸಚಿವರು ಹಾಗೂ ಪ್ರತಿನಿಧಿಗಳು ಘೋಷಿಸಿದ ಜಂಟಿ ಹೇಳಿಕೆಯಲ್ಲಿ `ಈ ಕ್ರಮವು ಪ್ರದೇಶದ ಸ್ಥಿರತೆಗೆ ಬೆದರಿಕೆಯೊಡ್ಡಲಿದೆ, ಸಂಘರ್ಷವನ್ನು ವ್ಯಾಪಕಗೊಳಿಸಲಿದೆ ಮತ್ತು ಶಾಂತಿಯ ಸಾಧ್ಯತೆಗಳಿಗೆ ತಡೆಯಾಗಲಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

`ವಸಾಹತು ಚಟುವಟಿಕೆಗಳು, ಹೊರಹಾಕುವ, ಮಾಲಕರನ್ನು ಸ್ಥಳಾಂತರಿಸುವ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಫೆಲೆಸ್ತೀನೀಯನ್ನರ ನೈಸರ್ಗಿಕ ಹಕ್ಕುಗಳ ಜತೆ ರಾಜಿ ಮಾಡಿಕೊಳ್ಳುವ ಪ್ರಸ್ತಾಪವನ್ನು ನಾವು ದೃಢವಾಗಿ ತಿರಸ್ಕರಿಸುತ್ತೇವೆ ಎಂದು ಜಂಟಿ ಹೇಳಿಕೆ ತಿಳಿಸಿದೆ. ಮಧ್ಯಪ್ರಾಚ್ಯದಲ್ಲಿ ನ್ಯಾಯಸಮ್ಮತ ಮತ್ತು ಸಮಗ್ರ ಶಾಂತಿ ಸ್ಥಾಪನೆಗೆ ಎರಡು ರಾಷ್ಟ್ರಗಳ ಪರಿಹಾರ ಸೂತ್ರವೇ ಸೂಕ್ತ ಎಂಬ ದೃಢನಿಲುವನ್ನು ಟ್ರಂಪ್ ಆಡಳಿತಕ್ಕೆ ಸ್ಪಷ್ಟಪಡಿಸುವುದಾಗಿ ಜಂಟಿ ಹೇಳಿಕೆ ತಿಳಿಸಿದೆ. 15 ತಿಂಗಳ ಯುದ್ಧದಲ್ಲಿ ಜರ್ಝರಿತಗೊಂಡಿರುವ ಗಾಝಾದಿಂದ ಫೆಲೆಸ್ತೀನೀಯರನ್ನು ಕರೆಸಿಕೊಳ್ಳುವಂತೆ ಟ್ರಂಪ್ ಕಳೆದ ವಾರ ಈಜಿಪ್ಟ್ ಮತ್ತು ಜೋರ್ಡಾನ್‍ಗೆ ಕರೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News