×
Ad

ಗಾಝಾದಲ್ಲಿ ಶಿಶುಗಳ ಹತ್ಯೆ ಕೂಡಲೇ ನಿಲ್ಲಬೇಕು: ಕೆನಡಾ ಪ್ರಧಾನಿ ಕರೆ

Update: 2023-11-15 12:31 IST

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (PTI)

ಜೆರುಸಲೇಂ: ಗಾಝಾದಲ್ಲಿನ ಮಹಿಳೆಯರು, ಮಕ್ಕಳು ಹಾಗೂ ನವಜಾತ ಶಿಶುಗಳ ಹತ್ಯೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಈ ಸ್ಥಿತಿಗೆ ಹಮಾಸ್ ಅನ್ನು ಹೊಣೆಯಾಗಿಸಬೇಕೇ ಹೊರತು ಇಸ್ರೇಲ್ ನನ್ನಲ್ಲ ಎಂದು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

ಅಕ್ಟೋಬರ್ 7ರ ಹಮಾಸ್ ದಾಳಿಯನ್ನು ಉಲ್ಲೇಖಿಸಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿರುವುದು ಇಸ್ರೇಲ್ ಅಲ್ಲ; ಬದಲಿಗೆ ಹೊಲೊಕಾಸ್ಟ್ ನಂತರ ಯಹೂದಿಗಳ ಮೇಲೆ ನಡೆದಿರುವ ಬೀಭತ್ಸ ದಾಳಿಯಲ್ಲಿ ನಮ್ಮ ನಾಗರಿಕರ ಶಿರಶ್ಛೇದ, ದಹನ ಹಾಗೂ ಹತ್ಯಾಕಾಂಡವನ್ನು ನಡೆಸಿರುವುದು ಹಮಾಸ್” ಎಂದು ಪ್ರತಿಪಾದಿಸಿದ್ದಾರೆ.

ಇದಕ್ಕೂ ಮುನ್ನ, “ಇಸ್ರೇಲ್ ಸರ್ಕಾರವು ಗರಿಷ್ಠ ಸಹನೆ ಪ್ರದರ್ಶಿಸಬೇಕೆಂದು ನಾನು ಆಗ್ರಹಿಸುತ್ತೇನೆ. ಇಡೀ ಜಗತ್ತು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತ ವರದಿಗಳನ್ನು ನೋಡುತ್ತಿದೆ. ವೈದ್ಯರು, ಕುಟುಂಬದ ಸದಸ್ಯರು, ಬದುಕುಳಿದವರು, ತಮ್ಮ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಸಾಕ್ಷ್ಯಗಳನ್ನು ಕೇಳುತ್ತಿದೆ” ಎಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಸ್ಟಿನ್ ಟ್ರುಡೊ ಹೇಳಿದ್ದರು. “ಜಗತ್ತು ಮಹಿಳೆಯರು, ಮಕ್ಕಳು ಹಾಗೂ ನವಜಾತ ಶಿಶುಗಳ ಹತ್ಯೆಗೆ ಸಾಕ್ಷಿಯಾಗುತ್ತಿದೆ. ಇದು ತಕ್ಷಣವೇ ನಿಲ್ಲಬೇಕು” ಎಂದೂ ಅವರು ಆಗ್ರಹಿಸಿದ್ದರು.

ಹಮಾಸ್ ತನ್ನ ಬಳಿ ಇರುವ 200ಕ್ಕೂ ಹೆಚ್ಚು ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದೂ ಜಸ್ಟಿನ್ ಟ್ರುಡೊ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News