×
Ad

ಇಸ್ರೇಲ್‌ ಗೆ 7.4 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಪೂರೈಕೆಗೆ ಟ್ರಂಪ್ ಅನುಮೋದನೆ

Update: 2025-02-08 21:40 IST

ಜೋ ಬೈಡನ್ , ಡೊನಾಲ್ಡ್ ಟ್ರಂಪ್ | PTI 

ವಾಷಿಂಗ್ಟನ್ : ಇಸ್ರೇಲ್‌ ಗೆ ಬಾಂಬ್‌ ಗಳು, ಕ್ಷಿಪಣಿಗಳು ಸೇರಿದಂತೆ 7.4 ಶತಕೋಟಿ ಡಾಲರ್‍ಗೂ ಅಧಿಕ ಮೊತ್ತದ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಅನುಮೋದನೆ ನೀಡಿರುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ.

6.75 ಶತಕೋಟಿ ಮೊತ್ತದ ಬಾಂಬ್‌ ಗಳು, ಮಾರ್ಗದರ್ಶಿ ಕಿಟ್‍ಗಳು ಹಾಗೂ ಫ್ಯೂಸ್‍ಗಳನ್ನು, 660 ದಶಲಕ್ಷ ಮೊತ್ತದ ಕ್ಷಿಪಣಿಗಳನ್ನು ಇಸ್ರೇಲ್‌ ಗೆ ಮಾರಾಟ ಮಾಡುವ ದಾಖಲೆಗೆ ವಿದೇಶಾಂಗ ಇಲಾಖೆ ಸಹಿ ಹಾಕಿರುವುದಾಗಿ ಅಮೆರಿಕದ ರಕ್ಷಣಾ ಭದ್ರತೆ ಸಹಕಾರ ಏಜೆನ್ಸಿ(ಡಿಎಸ್‍ಸಿಎ) ಹೇಳಿದೆ. ಪ್ರಸ್ತಾವಿತ ಬಾಂಬ್‌ ಗಳ ಮಾರಾಟವು ಪ್ರಸ್ತುತ ಮತ್ತು ಭವಿಷ್ಯದ ಬೆದರಿಕೆಗಳನ್ನು ಎದುರಿಸುವ ಇಸ್ರೇಲ್‍ನ ಸಾಮಥ್ರ್ಯವನ್ನು ವರ್ಧಿಸಲಿದೆ. ಅವರ ತಾಯ್ನಾಡಿನ ರಕ್ಷಣೆಯನ್ನು ಬಲಪಡಿಸುತ್ತದೆ ಮತ್ತು ಪ್ರಾದೇಶಿಕ ಬೆದರಿಕೆಗಳಿಗೆ ತಡೆಯಾಗಿ ಕಾರ್ಯನಿರ್ವಹಿಸುತ್ತದೆ. ಕ್ಷಿಪಣಿಗಳ ಮಾರಾಟವು ದೇಶದ ಗಡಿಯನ್ನು, ಪ್ರಮುಖ ಮೂಲಸೌಕರ್ಯಗಳನ್ನು ಹಾಗೂ ಜನಸಂಖ್ಯಾ ಕೇಂದ್ರಗಳನ್ನು ರಕ್ಷಿಸುವ ಇಸ್ರೇಲ್ ವಾಯುಪಡೆಯ ಸಾಮಥ್ರ್ಯವನ್ನು ಹೆಚ್ಚಿಸಲಿದೆ ಎಂದು ಡಿಎಸ್‍ಸಿಎ ಹೇಳಿದೆ.

2023ರ ಅಕ್ಟೋಬರ್‍ನಲ್ಲಿ ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ಇಸ್ರೇಲ್ ಮೇಲೆ ನಡೆಸಿದ ಅನಿರೀಕ್ಷಿತ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಝಾದ ಮೇಲೆ ನಡೆಸಿದ ಪ್ರತೀಕಾರ ದಾಳಿಯಲ್ಲಿ ವ್ಯಾಪಕ ಸಾವು-ನೋವು, ನಾಶ-ನಷ್ಟ ಸಂಭವಿಸಿದೆ. ಗಾಝಾದಲ್ಲಿ ಇಸ್ರೇಲ್‍ನ ದಾಳಿಯಲ್ಲಿ ನಾಗರಿಕರ ಸಾವು-ನೋವಿನ ಪ್ರಮಾಣ ಹೆಚ್ಚಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜೋ ಬೈಡನ್ 2000 ಪೌಂಡ್ ತೂಕದ ಬೃಹತ್ ಬಾಂಬ್‌ ಗಳನ್ನು ಇಸ್ರೇಲ್‌ ಗೆ ಪೂರೈಸುವ ಪ್ಯಾಕೇಜ್‍ಗೆ ತಡೆಯೊಡ್ಡಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದೊಡನೆ ಈ ಮಾರಕ ಬಾಂಬ್‌ ಗಳ ಪೂರೈಕೆಗೆ ಅನುಮೋದನೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News