ಆ ಕೊಳಕ ಝೆಲೆನ್‍ಸ್ಕಿಗೆ ಹೊಡೆಯದ ಟ್ರಂಪ್ ಸಂಯಮ `ಪವಾಡ': ಟ್ರಂಪ್-ಝೆಲೆನ್‍ಸ್ಕಿ ಜಟಾಪಟಿಗೆ ರಶ್ಯ ಪ್ರತಿಕ್ರಿಯೆ
PC : PTI
ಮಾಸ್ಕೋ: ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ನಡುವಿನ ಕಾವೇರಿದ ಮಾತುಕತೆಯ ಬಗ್ಗೆ ಶನಿವಾರ ಪ್ರತಿಕ್ರಿಯಿಸಿರುವ ರಶ್ಯ, ಅಮೆರಿಕ ಅಧ್ಯಕ್ಷ ಟ್ರಂಪ್‍ಗೆ ಬೆಂಬಲ ನೀಡುವುದಾಗಿ ಹೇಳಿದೆ.
ಶ್ವೇತಭವನದಲ್ಲಿ ನಡೆದ ಮಾತುಕತೆಯ ಸಂದರ್ಭ `ಕೊಳಕ ಝೆಲೆನ್‍ಸ್ಕಿಯ ಮೂತಿಗೆ ಗುದ್ದದ ಟ್ರಂಪ್ ಹಾಗೂ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಸಂಯಮ ಪವಾಡವಾಗಿದೆ' ಎಂದು ರಶ್ಯ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಹೇಳಿದ್ದಾರೆ. `ಅನ್ನ ಹಾಕಿದ ಕೈಗಳನ್ನೇ ಕಚ್ಚುವ ಕೊಳಕ ಮತ್ತು ವಿಶ್ವಾಸದ್ರೋಹಿ ಝೆಲೆನ್‍ಸ್ಕಿಯನ್ನು ಹೊಡೆಯದೆ ಟ್ರಂಪ್ ಅಪಾರ ಸಂಯಮ ತೋರಿದ್ದಾರೆ ಎಂದವರು ಶ್ಲಾಘಿಸಿದ್ದಾರೆ. ಉಕ್ರೇನ್‍ನ ಖನಿಜ ಸಂಪತ್ತನ್ನು ಹಂಚಿಕೊಳ್ಳುವ ಒಪ್ಪಂದವನ್ನು ಅಂತಿಮಗೊಳಿಸುವ ಹಾಗೂ ರಶ್ಯದ ಜತೆಗಿನ ಶಾಂತಿ ಒಪ್ಪಂದದ ಬಗ್ಗೆ ಚರ್ಚಿಸುವ ಉದ್ದೇಶದಿಂದ ಶುಕ್ರವಾರ ಅಮೆರಿಕದ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಹಾಗೂ ಝೆಲೆನ್‍ಸ್ಕಿ ವಾಗ್ಯುದ್ದ ನಡೆಸಿದ್ದರು.
2022ರಲ್ಲಿ ಉಕ್ರೇನ್ ಆಡಳಿತ ಏಕಾಂಗಿಯಾಗಿತ್ತು ಎಂದು ಶ್ವೇತಭವನದಲ್ಲಿ ಝೆಲೆನ್‍ಸ್ಕಿ ಪ್ರತಿಪಾದಿಸಿದ್ದು ಅವರ ಸುಳ್ಳುಗಳ ಸರಮಾಲೆಯಲ್ಲಿನ ಅತೀ ದೊಡ್ಡ ಸುಳ್ಳು ಎಂದು ಭಾವಿಸುವುದಾಗಿ ಝಕರೋವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಝೆಲೆನ್‍ಸ್ಕಿ ಓರ್ವ ದುರಹಂಕಾರಿ ಹಂದಿ. ಆತನಿಗೆ ಶ್ವೇತಭವನದಲ್ಲಿ ಸರಿಯಾದ ರೀತಿಯಲ್ಲಿ ಕಪಾಳಮೋಕ್ಷ ಆಗಿದೆ. ಉಕ್ರೇನ್ ಆಡಳಿತ ಮೂರನೇ ವಿಶ್ವಯುದ್ಧದ ಜತೆ ಜೂಜಾಡುತ್ತಿದೆ' ಎಂದು ರಶ್ಯದ ಮಾಜಿ ಅಧ್ಯಕ್ಷ, ಭದ್ರತಾ ಸಮಿತಿಯ ಹಾಲಿ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕ ಮತ್ತು ಉಕ್ರೇನ್ ನಾಯಕರ ನಡುವಿನ ಜಟಾಪಟಿ ಐತಿಹಾಸಿಕ ಎಂದು ರಶ್ಯದ `ನೇರ ಹೂಡಿಕೆ ನಿಧಿ'ಯ ಮುಖ್ಯಸ್ಥ ಕಿರಿಲ್ ಡಿಮಿಟ್ರಿಯೆವ್ ಟ್ವೀಟ್ ಮಾಡಿದ್ದಾರೆ. ಫೆಬ್ರವರಿ 18ರಂದು ಸೌದಿ ಅರೆಬಿಯಾದಲ್ಲಿ ರಶ್ಯ-ಅಮೆರಿಕ ನಡುವೆ ನಡೆದ ಮಾತುಕತೆಯಲ್ಲಿ ಟಿಮಿಟ್ರಿಯೆವ್ ರಶ್ಯ ನಿಯೋಗದ ಭಾಗವಾಗಿದ್ದರು.
►ಸಂಪೂರ್ಣ ರಾಜತಾಂತ್ರಿಕ ವೈಫಲ್ಯ; ರಶ್ಯ
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಅವರ ಅಮೆರಿಕ ಭೇಟಿ ಸಂಪೂರ್ಣ ರಾಜಕೀಯ ಮತ್ತು ರಾಜತಾಂತ್ರಿಕ ವೈಫಲ್ಯವಾಗಿದೆ ಎಂದು ರಶ್ಯ ಶನಿವಾರ ಹೇಳಿಕೆ ನೀಡಿದೆ.
ನವ-ನಾಝಿ ಆಡಳಿತದ ಮುಖ್ಯಸ್ಥ ಝೆಲೆನ್‍ಸ್ಕಿ ಫೆಬ್ರವರಿ 29ರಂದು ವಾಷಿಂಗ್ಟನ್ ಗೆ ನೀಡಿದ ಭೇಟಿ ಉಕ್ರೇನ್ ಆಡಳಿತದ ಸಂಪೂರ್ಣ ರಾಜಕೀಯ ಮತ್ತು ರಾಜತಾಂತ್ರಿಕ ವೈಫಲ್ಯವಾಗಿದೆ' ಎಂದು ರಶ್ಯ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಹೇಳಿದ್ದಾರೆ.