×
Ad

ಸಂಭಾವ್ಯ ಗಡೀಪಾರು: ಟ್ರಂಪ್ ಆಡಳಿತದ ವಿರುದ್ಧ ನ್ಯಾಯಾಲಯದ ಕಟ್ಟೆ ಏರಿದ ಭಾರತೀಯ ವಿದ್ಯಾರ್ಥಿನಿ

Update: 2025-04-17 11:16 IST

ಡೊನಾಲ್ಡ್ ಟ್ರಂಪ್ | PTI 

ವಾಷಿಂಗ್ಟನ್: ಸ್ಟೂಡೆಂಟ್ ಇಮಿಗ್ರೇಶನ್ ಸ್ಥಾನಮಾನವನ್ನು ಕಾನೂನುಬಾಹಿರವಾಗಿ ಕಿತ್ತುಹಾಕಲಾಗುತ್ತಿದೆ ಹಾಗೂ ಈ ಕಾರಣದಿಂದ ನಾವು ಗಡೀಪಾರುಗೊಳ್ಳುವ ಅಪಾಯವಿದೆ ಎಂದು ಭಾರತೀಯ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಟ್ರಂಪ್ ಆಡಳಿತದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಮಿಚಿಗನ್ ಪಬ್ಲಿಕ್ ಯುನಿವರ್ಸಿಟಿ ವಿದ್ಯಾರ್ಥಿಗಳಾದ ಚಿನ್ಮಯ್ ದಿಯೋರ್ ಸೇರಿದಂತೆ ನಾಲ್ವರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಹೋಮ್‍ಲ್ಯಾಂಡ್ ಸೆಕ್ಯುರಿಟಿ ಡಿಪಾರ್ಟ್‍ಮೆಂಟ್ (ಡಿಎಚೆಸ್) ಮತ್ತ ಇಮಿಗ್ರೇಶನ್ ಅಧಿಕಾರಿಗಳ ವಿರುದ್ಧ ಫೆಡರಲ್ ದಾವೆ ಹೂಡುವ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಚೀನಾದ ಕ್ಸಿಯಾಂಗ್‍ಯುನ್ ಮತ್ತು ಕ್ವಿಯಿ ರಂಗ್ ಹಾಗೂ ನೇಪಾಳದ ಯೋಗೀಶ್ ಜೋಶಿ ದಾವೆ ಹೂಡಿದ ಇತರ ವಿದ್ಯಾರ್ಥಿಗಳು. ವಿದ್ಯಾರ್ಥಿ ಮತ್ತು ವಿನಿಮಯ ಭೇಟಿ ಮಾಹಿತಿ ವ್ಯವಸ್ಥೆಯಡಿ ತಮ್ಮ ವಿದ್ಯಾರ್ಥಿ ಇಮಿಗ್ರೇಶನ್ ಸ್ಥಾನಮಾನವನ್ನು ಸೂಕ್ತ ನೋಟಿಸ್ ನೀಡದೇ ಮತ್ತು ವಿವರಣೆ ನೀಡದೇ ಅಕ್ರಮವಾಗಿ ರದ್ದುಪಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ವಿದ್ಯಾರ್ಥಿ ಮತ್ತು ವಿನಿಮಯ ಭೇಟಿ ಮಾಹಿತಿ ವ್ಯವಸ್ಥೆಯಡಿ ತಾವು ಹೊಂದಿರುವ ಎಫ್-1 ವಿದ್ಯಾರ್ಥಿ ವೀಸಾವನ್ನು ದಿಢೀರನೇ ಮತ್ತು ಕಾನೂನು ಬಾಹಿರವಾಗಿ ರದ್ದುಪಡಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ಸ್ಥಾನಮಾನವನ್ನು ಮರುಸ್ಥಾಪಿಸಿ, ತಮ್ಮ ಅಧ್ಯಯನ ಪೂರ್ಣಗೊಳಿಸಲು ಅವಕಾಶ ನೀಡಬೇಕು ಹಾಗೂ ಬಂಧನ ಹಾಗೂ ಗಡೀಪಾರಿನ ಭೀತಿಯಿಂದ ರಕ್ಷಣೆ ನೀಡಬೇಕು ಎಂದು ದಾವೆಯಲ್ಲಿ ಕೋರಲಾಗಿದೆ. ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ಬೆಂಬಲದೊಂದಿಗೆ ಈ ದಾವೆ ಹೂಡಲಾಗಿದೆ. ವಿದ್ಯಾರ್ಥಿಗಳನ್ನು ಗಡೀಪಾರು ಮಾಡದಂತೆ ತುರ್ತು ಇಂಜೆಂಕ್ಷನ್‍ನೀಡುವಂತೆಯೂ ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News