ಟ್ರಂಪ್ ಪತ್ನಿಯ ಗಡೀಪಾರಿಗೆ ಆಗ್ರಹಿಸಿ ಆನ್‍ಲೈನ್ ಅಭಿಯಾನ
ಡೊನಾಲ್ಡ್ ಟ್ರಂಪ್ , ಮೆಲಾನಿಯಾ ಟ್ರಂಪ್ | PC : X \ @TrumpRealDaily
ವಾಷಿಂಗ್ಟನ್: ಗಡೀಪಾರು ಉಪಕ್ರಮಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರಗೊಳಿಸುತ್ತಿರುವಂತೆಯೇ ಅವರ ಪತ್ನಿ ಮೆಲಾನಿಯಾ ಟ್ರಂಪ್ ಹಾಗೂ ಕುಟುಂಬದ ಸದಸ್ಯರನ್ನು ಗಡೀಪಾರುಗೊಳಿಸುವಂತೆ ಆಗ್ರಹಿಸಿ ಆನ್‍ಲೈನ್ ಅಭಿಯಾನ ವೇಗ ಪಡೆದುಕೊಂಡಿದೆ.
`ಪ್ರಥಮ ಸುತ್ತಿನ ಗಡೀಪಾರು ಪ್ರಕ್ರಿಯೆಯಲ್ಲಿ ಮೆಲಾನಿಯಾ, ಅವರ ಹೆತ್ತವರು ಹಾಗೂ ಪುತ್ರ ಬ್ಯಾರನ್ ಟ್ರಂಪ್ ರನ್ನು ಗಡೀಪಾರು ಮಾಡಿ' ಎಂದು ಆಗ್ರಹಿಸುವ ಆನ್‍ಲೈನ್ ಅರ್ಜಿಗೆ ಈಗಾಗಲೇ ಸುಮಾರು 3000 ಮಂದಿ ಸಹಿ ಹಾಕಿರುವುದಾಗಿ ವರದಿಯಾಗಿದೆ. ಕಾನೂನಿನ ಆಧಾರದಲ್ಲಿ ಅಮೆರಿಕದ ಪೌರತ್ವ ಪಡೆದಿರುವವರ ಗಡೀಪಾರಿಗೆ ಟ್ರಂಪ್ ಬಯಸಿರುವುದರಿಂದ ಮೊದಲ ಹಂತದಲ್ಲಿ ಮೆಲಾನಿಯಾ ಹಾಗೂ ಅವರ ಹೆತ್ತವರನ್ನು ಗಡೀಪಾರು ಮಾಡಬೇಕು. ತನ್ನ ತಾಯಿಯ ತಾಯಿ ಬೇರೆ ದೇಶದಲ್ಲಿ ಜನಿಸಿದವರಾದ್ದರಿಂದ ಬ್ಯಾರನ್ ಟ್ರಂಪ್ ರನ್ನೂ ಗಡೀಪಾರು ಮಾಡಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಸ್ಲೊವೇನಿಯಾದಲ್ಲಿ 1970ರಲ್ಲಿ ಜನಿಸಿದ್ದ ಮೆಲಾನಿಯಾ 1996ರಲ್ಲಿ ಅಮೆರಿಕಾಕ್ಕೆ ಆಗಮಿಸಿದ್ದರು. 2001ರಲ್ಲಿ ಗ್ರೀನ್ ಕಾರ್ಡ್ ಪಡೆದು 2006ರಲ್ಲಿ ಅಮೆರಿಕದ ಪೌರತ್ವ ಪಡೆದಿದ್ದರು ಹಾಗೂ 2007ರಲ್ಲಿ ಡೊನಾಲ್ಡ್ ಟ್ರಂಪ್ ರನ್ನು ವಿವಾಹವಾಗಿದ್ದರು.