ರಶ್ಯದೊಂದಿಗೆ `ಅಂತಿಮ ಎಚ್ಚರಿಕೆ' ಆಟ ಬೇಡ: ಟ್ರಂಪ್ ಗೆ ರಶ್ಯ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ | PC : NDTV
ಮಾಸ್ಕೋ, ಜು.29: ಉಕ್ರೇನ್ನೊಂ ದಿಗೆ 12 ದಿನಗಳೊಳಗೆ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಗಡುವನ್ನು ತಿರಸ್ಕರಿಸಿರುವ ರಶ್ಯ, ರಶ್ಯದ ಜೊತೆಗೆ ಅಂತಿಮ ಎಚ್ಚರಿಕೆಯ ಆಟ ಆಡಬೇಡಿ ಎಂದು ಟ್ರಂಪ್ ಗೆ ಎಚ್ಚರಿಕೆ ನೀಡಿದೆ.
ರಶ್ಯವು ಇಸ್ರೇಲ್ ಅಥವಾ ಇರಾನ್ ಅಲ್ಲ. ಪ್ರತಿಯೊಂದು ಹೊಸ ಗಡುವು ಕೂಡಾ ಬೆದರಿಕೆ ಮತ್ತು ಯುದ್ಧದ ಕಡೆಗಿನ ಹೆಜ್ಜೆಯಾಗಿದೆ. ರಶ್ಯ ಮತ್ತು ಉಕ್ರೇನ್ ನಡುವೆ ಅಲ್ಲ, ಟ್ರಂಪ್ ಅವರ ದೇಶದೊಂದಿಗೆ' ಎಂದು ರಶ್ಯದ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಡಿಮಿಟ್ರಿ ಮೆಡ್ವೆಡೇವ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ, ಮಧ್ಯ ಉಕ್ರೇನ್ ನ ನಿಪ್ರೋ ಪ್ರಾಂತದಲ್ಲಿ ರಶ್ಯದ ಕ್ಷಿಪಣಿಯು ಮೂರು ಮಹಡಿಯ ಕಟ್ಟಡವನ್ನು ಭಾಗಶಃ ನಾಶಗೊಳಿಸಿದ್ದು ಪಕ್ಕದಲ್ಲಿದ್ದ ಆಸ್ಪತ್ರೆಗೆ ಹಾನಿ ಎಸಗಿದೆ. ದಾಳಿಯಲ್ಲಿ 23 ವರ್ಷದ ಗರ್ಭಿಣಿ ಮಹಿಳೆ ಸೇರಿದಂತೆ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು ಇತರ 8 ಮಂದಿ ಗಾಯಗೊಂಡಿದ್ದಾರೆ. ಸೋಮವಾರ ತಡರಾತ್ರಿಯಿಂದ ಉಕ್ರೇನ್ ನ ಮೇಲೆ ರಶ್ಯವು 2 ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ 37 ಡ್ರೋನ್ ಗಳನ್ನು ಪ್ರಯೋಗಿಸಿದ್ದು 32 ಡ್ರೋನ್ ಗಳನ್ನು ತನ್ನ ವಾಯುಪಡೆ ಹೊಡೆದುರುಳಿಸಿದೆ ಎಂದು ಉಕ್ರೇನ್ ನ ವಾಯುಪಡೆ ಮಂಗಳವಾರ ಹೇಳಿದೆ.