ಉಕ್ರೇನ್-ರಶ್ಯ ಯುದ್ಧ ಕೊನೆಗೊಳಿಸಲು ಡೊನ್ಬಾಸ್ ಪ್ರಾಂತ ವಿಭಜನೆ : ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ |Photo Credit : AP \ PTI
ವಾಷಿಂಗ್ಟನ್, ಅ.20: ಉಕ್ರೇನ್‍ನ ಡೊನ್ಬಾಸ್ ಪ್ರಾಂತವನ್ನು ವಿಭಜಿಸುವುದು ರಶ್ಯ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಅತ್ಯಂತ ಉತ್ತಮ ಮಾರ್ಗವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೊನ್ಬಾಸ್ ಪ್ರಾಂತದಲ್ಲಿ ಈಗಿನ ಸ್ಥಿತಿಗತಿಯನ್ನು ಆಧರಿಸಿ ಅದನ್ನು ವಿಭಜಿಸಬೇಕು. ಆಗ ಯುದ್ಧ ನಿಲ್ಲುತ್ತದೆ. ಆ ಬಳಿಕ ಎರಡೂ ಕಡೆಯವರು ಮಾತುಕತೆ ನಡೆಸಿ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಮಾಧ್ಯಮದವರ ಜೊತೆ ಮಾತನಾಡಿದ ಟ್ರಂಪ್ ಪ್ರತಿಪಾದಿಸಿದ್ದಾರೆ. ಡೊನ್ಬಾಸ್ ಪ್ರಾಂತದ ಹೆಚ್ಚಿನ ಭಾಗ ಈಗ ರಶ್ಯದ ನಿಯಂತ್ರಣದಲ್ಲಿದೆ.
ಡೊನ್ಬಾಸ್ ಪ್ರಾಂತವನ್ನು ತನಗೆ ಬಿಟ್ಟುಕೊಟ್ಟರೆ ಉಕ್ರೇನ್‍ನ ಖೆರ್ಸಾನ್, ಝಪೋರಿಝಿಯಾದಲ್ಲಿ ತನ್ನ ನಿಯಂತ್ರಣದಲ್ಲಿರುವ ಕೆಲವು ಪ್ರದೇಶಗಳಿಂದ ಹಿಂದೆ ಸರಿಯುವುದಾಗಿ ಇತ್ತೀಚೆಗೆ ಟ್ರಂಪ್ ಜೊತೆಗಿನ ಮಾತುಕತೆಯಲ್ಲಿ ಪುಟಿನ್ ಹೇಳಿರುವುದಾಗಿ `ದಿ ಗಾರ್ಡಿಯನ್' ವರದಿ ಮಾಡಿದೆ.
ಈ ಮಧ್ಯೆ, `ಉಕ್ರೇನ್ ಎಂದಿಗೂ ಭಯೋತ್ಪಾದಕರಿಗೆ ಅವರ ಅಪರಾಧಕ್ಕಾಗಿ ಬಹುಮಾನ ನೀಡುವುದಿಲ್ಲ ಮತ್ತು ಈ ನಿಲುವನ್ನು ಎತ್ತಿಹಿಡಿಯಲು ನಮ್ಮ ಮಿತ್ರರಾಷ್ಟ್ರಗಳ ಬೆಂಬಲದ ಭರವಸೆಯಿದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.