USAID ವಿದೇಶಿ ನೆರವಿನ ಶೇಕಡ 90ರಷ್ಟು ಒಪ್ಪಂದ ರದ್ದುಪಡಿಸಿದ ಟ್ರಂಪ್ ಆಡಳಿತ
PC: x.com/JKifah90663
ವಾಷಿಂಗ್ಟನ್: ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID ) ನಿಧಿಯನ್ನು ರದ್ದುಪಡಿಸಿದ ಬಳಿಕ ಮತ್ತೊಂದು ಹೆಜ್ಜೆ ಮುಂದುವರಿದಿರುವ ಟ್ರಂಪ್ ಆಡಳಿತ ಏಜೆನ್ಸಿ ಈ ಮೊದಲು ಮಾಡಿಕೊಂಡಿದ್ದ ವಿದೇಶಿ ನೆರವಿನ ಒಪ್ಪಂದಗಳನ್ನು ರದ್ದುಪಡಿಸಿದೆ ಎಂದು ವಾಷಿಂಗ್ಟನ್ ಫ್ರೀ ಬೀಕನ್ ವರದಿ ಮಾಡಿದೆ.
ಅಮೆರಿಕದ ರಕ್ಷಣಾ ಇಲಾಖೆ ವಿದೇಶಿ ನೆರವಿನ ಪರಾಮರ್ಶೆಯನ್ನು ಪೂರ್ಣಗೊಳಿಸಿದ ಬೆನ್ನಲ್ಲೇ, ಒಪ್ಪಂದಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸುಮಾರು 60 ಶತಕೋಟಿ ಡಾಲರ್ ಮೌಲ್ಯದ 15 ಸಾವಿರ ಒಪ್ಪಂದಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಅಮೆರಿಕದ ರಕ್ಷಣಾ ಇಲಾಖೆ ಒದಗಿಸಿದ ವಿದೇಶಿ ನೆರವು ಮತ್ತು USAID ನೀಡಿರುವ ನೆರವು ಕೂಡಾ ಸೇರುತ್ತದೆ.
ಅಮೆರಿಕದ ರಕ್ಷಣಾ ಇಲಾಖೆಯಡಿ ಸುಮಾರು 4.4. ಶತಕೋಟಿ ರೂಪಾಯಿ ಮೌಲ್ಯದ 4100 ವಿದೇಶಿ ನೆರವಿನ ಅನುದಾನವನ್ನು ಕೂಡಾ ರದ್ದುಪಡಿಸಲಾಗುತ್ತಿದೆ. ಯುಎಸ್ಏಡ್ (USAID) ಅನುದಾನದ ಪೈಕಿ ಟ್ರಂಪ್ ಆಡಳಿತ 54 ಶತಕೋಟಿ ಡಾಲರ್ ಮೌಲ್ಯದ 5800 ಒಪ್ಪಂದಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಇದು ಏಜೆನ್ಸಿ ಹಲವು ವರ್ಷಗಳಲ್ಲಿ ನೀಡಲು ಉದ್ದೇಶಿಸಿರುವ ಅನುದಾನದ ಶೇಕಡ 92ರಷ್ಟಾಗಿದೆ.