ಮತ್ತೆ ಮೋದಿ ‘ಗೆಳೆತನ’ ಜಪಿಸಿದ ಟ್ರಂಪ್!
ಭಾರತ ಜೊತೆ ಬಾಂಧವ್ಯ ಮರುಸ್ಥಾಪನೆಗೆ ಒಲವು
ಅಧ್ಯಕ್ಷ ಡೊನಾಲ್ಡ್ , ನರೇಂದ್ರ ಮೋದಿ | PTI
ಹೊಸದಿಲ್ಲಿ,ಸೆ.6: ಎಸ್‌ಸಿಓ ಶೃಂಗಸಭೆಯ ಬಳಿಕ ರಶ್ಯಾ ಹಾಗೂ ಚೀನಾ ಜೊತೆ ಬಾಂಧವ್ಯ ವೃದ್ಧಿಗೆ ಭಾರತವು ಮುಂದಾಗಿರುವುದರಿಂದ ವಿಚಲಿತಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಹೊಸದಿಲ್ಲಿ ಜೊತೆ ಹದಗೆಟ್ಟಿರುವ ಸಂಬಂಧವನ್ನು ಮರುಸ್ಥಾಪಿಸಲು ಒಲವು ವ್ಯಕ್ತಪಡಿಸಿದ್ದಾರೆ.
ಶ್ವೇತಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‘‘ ನಾನು ಮೋದಿ ಜೊತೆ ಎಂದಿಗೂ ಸ್ನೇಹದಿಂದಿರುತ್ತೇನೆ. ಅವರೊಬ್ಬ ಮಹಾನ್ ಪ್ರಧಾನಿ. ಆದರೆ ಅವರು ಈ ನಿರ್ದಿಷ್ಟ ಸನ್ನಿವೇಶದಲ್ಲಿ ಅವರು ಮಾಡುತ್ತಿರುವುದನ್ನು ನಾನು ಇಷ್ಟಪಡುವುದಿಲ್ಲ. ಭಾರತ ಹಾಗೂ ಅಮೆರಿಕ ಅತ್ಯಂತ ವಿಶೇಷವಾದ ಬಾಂಧವ್ಯವನ್ನು ಹೊಂದಿವೆ ’’ ಎಂದು ಹೇಳಿದ್ದಾರೆ.
ಭಾರತದ ಜೊತೆ ಸಂಬಂಧ ಸುಧಾರಣೆ ಸಿದ್ಧರಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.
ಟ್ರಂಪ್ ಅವರು ಸೋಮವಾರ ಸಾಮಾಜಿಕ ಜಾಲತಾಣ ‘ಟ್ರೂಥ್ ಸೋಶಿಯಲ್’ನಲ್ಲಿ ಪ್ರಕಟಿಸಿದ ಪೋಸ್ಟ್ ಒಂದರಲ್ಲಿ ಅಮೆರಿಕವು ಭಾರತ ಹಾಗೂ ರಶ್ಯವನ್ನು ಚೀನಾಕ್ಕೆ ಕಳೆದುಕೊಂಡಿದೆ ಎಂದು ಹೇಳಿದ್ದರು. ರಶ್ಯ ಜೊತೆ ಭಾರತವು ತೈಲ ಖರೀದಿ ಮುಂದುವರಿಸಿರುವುದರ ಕುರಿತಾಗಿ ತನ್ನ ಆತಂಕವನ್ನು ಅವರು ಪುನರುಚ್ಚರಿಸಿದ್ದರು.
ಭಾರತದ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕವನ್ನು ವಿಧಿಸಿರುವ ನಡುವೆಯೇ ಪ್ರಧಾನಿ ಮೋದಿ ಅವರು ಎಸ್‌ಸಿಓ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಟ್ರಂಪ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಾಮಾಗ್ರಿಗಳ ಮೇಲೆ ಟ್ರಂಪ್ ಅವರು ಶೇ.25 ಪ್ರತಿ ಸುಂಕವನ್ನು ವಿಧಿಸಿರುವ ಜೊತೆಗೆ, ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಶ್ಯದಿಂದ ತೈಲವನ್ನು ಖರೀದಿಸುತ್ತಿರುವುದಕ್ಕಾಗಿ ಹೆಚ್ಚುವರಿಯಾಗಿ ಶೇ.25 ಸುಂಕವನ್ನು ಘೋಷಿಸಿದ್ದರು.
ತನಗೆ ಶೇ.50 ಸುಂಕವನ್ನು ವಿಧಿಸಿರುವುದನ್ನು ಭಾರತ ಖಂಡಿಸಿದ್ದು, ಇದು ಅನ್ಯಾಯಹಾಗೂ ಅತಾರ್ಕಿಕವೆಂದು ಹೇಳಿದೆ.
ಅಮೆರಿಕ ಅಧ್ಯಕ್ಷರ ಪ್ರಶಂಸೆಗೆ ಮೋದಿ ಸ್ವಾಗತ
ಸುಂಕ ವಿವಾದಕ್ಕೆ ಸಂಬಂಧಿಸಿ ಭಾರತ ಹಾಗೂ ಅಮೆರಿಕ ಬಾಂಧವ್ಯದಲ್ಲಿ ಬಿಕ್ಕಟ್ಟು ಉಂಟಾಗಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ತನ್ನನ್ನು ‘ಮಹಾನ್ ಪ್ರಧಾನಿ’ ಹಾಗೂ ‘ಸ್ನೇಹಿತ’ ಎಂದು ಬಣ್ಣಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷರ ಭಾವನೆಗಳಿಗೆ ಪ್ರತಿಸ್ಪಂದಿಸುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶನಿವಾರ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಅವರು, ‘‘ಅಧ್ಯಕ್ಷ ಟ್ರಂಪ್ ಅವರ ಭಾವನೆಗಳನ್ನು ನಾನು ಗಾಢವಾಗಿ ಪ್ರಶಂಸಿಸುತ್ತೇನೆ ಹಾಗೂ ಪೂರ್ಣವಾಗಿ ಪ್ರತಿಸ್ಪಂದಿಸುತ್ತೇನೆ. ಭಾರತ ಹಾಗೂ ಅಮೆರಿಕ ಅತ್ಯಂತ ಸಕಾರಾತ್ಮಕ ಹಾಗೂ ಪುರೋಗಾಮಿಯಾದ ಸಮಗ್ರ ಹಾಗೂ ವ್ಯೆಹಾತ್ಮಕ ಜಾಗತಿಕ ಪಾಲುದಾರಿಕೆಯನ್ನು ಭಾರತ ಮತ್ತು ಅಮೆರಿಕ ಹೊಂದಿದೆ’’ ಎಂದವರು ಹೇಳಿದ್ದಾರೆ.
ಭಾರತೀಯ ಉತ್ಪನ್ನಗಳಿಗೆ ಶೇ.50ರಷ್ಟು ಸುಂಕವನ್ನು ವಿಧಿಸುವ ಅಮೆರಿಕದ ನಡೆಯಿಂದಾಗಿ ಉಭಯದೇಶಗಳ ದ್ವಿಪಕ್ಷೀಯ ಬಾಂಧವ್ಯಗಳು ಹದಗೆಟ್ಟಿರುವ ನಡುವೆ ಈ ಇಬ್ಬರು ಈ ಹೇಳಿಕೆ ನೀಡಿರುವುದು ಮಹತ್ವದ ಬೆಳವಣಿಗೆಯೆಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆಪ್ಟೆಂಬರ್ 23ರಂದು ಭಾಷಣ ಮಾಡಲಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಲಿರುವ ಚೊಚ್ಚಲ ಭಾಷಣ ಇದಾಗಲಿದೆ.