ಗಾಝಾ ಯುದ್ಧ ಕೊನೆಗೊಳಿಸಲು 20 ಅಂಶಗಳ ಯೋಜನೆಗೆ ನೆತನ್ಯಾಹು ಒಪ್ಪಿಗೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
"ದೋಹಾದ ಮೇಲೆ ದಾಳಿ ಮಾಡಿದ್ದಕ್ಕೆ ಖತರ್ ಬಳಿ ಕ್ಷಮೆಯಾಚಿಸಿದ ನೆತನ್ಯಾಹು"
(ಫೋಟೊ- reuters.com)
ವಾಷಿಂಗ್ಟನ್, ಸೆ.30: ಗಾಝಾದಲ್ಲಿನ ಯುದ್ಧವನ್ನು ಕೊನೆಗೊಳಿಸಲು 20 ಅಂಶಗಳ ಯೋಜನೆಯನ್ನು ಮುಂದಿರಿಸಿದ್ದು ಇದನ್ನು ಇಸ್ರೇಲ್, ಅರಬ್ ಮತ್ತು ಮುಸ್ಲಿಮ್ ರಾಷ್ಟ್ರಗಳು ಬೆಂಬಲಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಸೋಮವಾರ ಶ್ವೇತಭವನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರಂಪ್ `ಇಸ್ರೇಲ್ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದರಿಂದ ಒಪ್ಪಂದ `ಬಹಳ ಹತ್ತಿರದಲ್ಲಿದೆ'. ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವ ಅಂಶಕ್ಕೆ ಅರಬ್ ಮತ್ತು ಮುಸ್ಲಿಮ್ ರಾಷ್ಟ್ರಗಳು ಬದ್ಧವಾಗಿವೆ. ಇದೀಗ ನಾವು ಮುಂದಿರಿಸಿದ ಯೋಜನೆಯ ಅಂಶಗಳನ್ನು ಹಮಾಸ್ ಸ್ವೀಕರಿಸುವ ಸಮಯ ಬಂದಿದೆ' ಎಂದರು.
ಇದು ದೊಡ್ಡ, ಬಹು ಸುಂದರ ದಿನವಾಗಿದೆ. ನಾವು ಗಾಝಾದ ಬಗ್ಗೆ ಮಾತನಾಡುತ್ತಿಲ್ಲ. ಗಾಝಾವನ್ನು ಮೀರಿ ಮಾತನಾಡುತ್ತಿದ್ದೇವೆ. ಈ ಯೋಜನೆಯು ಎಲ್ಲ ಸಮಸ್ಯೆಗಳನ್ನೂ ಪರಿಹರಿಸಲಿದ್ದು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲಿದೆ. ನಾವು ಇವತ್ತು ಮುಂದಿರಿಸಿದ ಯೋಜನೆಯು ತಕ್ಷಣ ಯುದ್ಧವನ್ನು ಅಂತ್ಯಗೊಳಿಸುವ, ನಮ್ಮ ಎಲ್ಲಾ ಒತ್ತೆಯಾಳುಗಳು ಸ್ವದೇಶಕ್ಕೆ ಹಿಂದಿರುಗುವ ಮತ್ತು ಇಸ್ರೇಲ್‍ನ ಭದ್ರತೆಯನ್ನು, ಫೆಲೆಸ್ತೀನೀಯರ ಯಶಸ್ಸನ್ನು ಶಾಶ್ವತಗೊಳಿಸುವತ್ತ ಕೇಂದ್ರೀಕರಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕಾದ ಪ್ರಸ್ತಾಪವನ್ನು ಈಜಿಪ್ಟ್ ಮತ್ತು ಖತರ್‌ನ ಮಧ್ಯಸ್ಥಿಕೆದಾರರು ಸೋಮವಾರ ತಡರಾತ್ರಿ ಹಮಾಸ್‍ಗೆ ಸಲ್ಲಿಸಿದ್ದಾರೆ. ಹಮಾಸ್ ಪ್ರತಿಕ್ರಿಯೆ ನೀಡಲು ಹಲವಾರು ದಿನ ತೆಗೆದುಕೊಳ್ಳಬಹುದು ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ. ಸುದ್ದಿಗೋಷ್ಟಿಯ ಕೆಲ ಸಮಯದ ಬಳಿಕ ಸೌದಿ ಅರೆಬಿಯಾ, ಜೋರ್ಡಾನ್, ಯುಎಇ, ಇಂಡೋನೇಶ್ಯಾ, ಪಾಕಿಸ್ತಾನ, ಟರ್ಕಿ, ಖತರ್ ಮತ್ತು ಈಜಿಪ್ಟ್‍ನ ವಿದೇಶಾಂಗ ಸಚಿವರು ನೀಡಿರುವ ಜಂಟಿ ಹೇಳಿಕೆಯಲ್ಲಿ ಟ್ರಂಪ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದು ಗಾಝಾ ಶಾಂತಿ ಯೋಜನೆಯ ಅನುಷ್ಠಾನವನ್ನು ಮುನ್ನಡೆಸಲು ಅಮೆರಿಕದ ಜೊತೆ ತೊಡಗಿಸಿಕೊಳ್ಳುವ ವಾಗ್ದಾನ ಮಾಡಿರುವುದಾಗಿ ವರದಿಯಾಗಿದೆ.
ಯೋಜನೆಯ ಪ್ರಮುಖ ಅಂಶ
ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಲು ಶ್ವೇತಭವನ ಬಿಡುಗಡೆಗೊಳಿಸಿರುವ 20 ಅಂಶದ ಯೋಜನೆಯ ಪ್ರಮುಖ ಅಂಶಗಳು:
► ಒಪ್ಪಂದವನ್ನು ಒಪ್ಪಿಕೊಂಡಿರುವುದಾಗಿ ಇಸ್ರೇಲ್ ಬಹಿರಂಗವಾಗಿ ಘೋಷಿಸಿದ 72 ಗಂಟೆಗಳೊಳಗೆ ಎಲ್ಲಾ ಒತ್ತೆಯಾಳುಗಳು(ಬದುಕುಳಿದವರು ಅಥವಾ ಮೃತಪಟ್ಟವರು) ಸ್ವದೇಶಕ್ಕೆ ಮರಳುತ್ತಾರೆ.
► ಎಲ್ಲಾ ಒತ್ತೆಯಾಳುಗಳ ಬಿಡುಗಡೆಯ ಬಳಿಕ ಇಸ್ರೇಲ್ ಜೀವಾವಧಿ ಶಿಕ್ಷೆಗೊಳಗಾದ 250 ಕೈದಿಗಳು ಹಾಗೂ 2023ರ ಅಕ್ಟೋಬರ್ 7ರ ಬಳಿಕ ಬಂಧಿಸಲಾದ 1700 ಗಾಝಾ ನಿವಾಸಿಗಳನ್ನು ಬಿಡುಗಡೆಗೊಳಿಸಲಿದೆ.
► ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ಆ್ಯಮ್ನೆಸ್ಟಿ ಇಂಟರ್‍ನ್ಯಾಷನಲ್‍ಗೆ ಒಪ್ಪಿಸಬೇಕು. ಗಾಝಾ ತೊರೆಯಲು ಬಯಸುವ ಹಮಾಸ್ ಸದಸ್ಯರಿಗೆ ಅವರು ಇಚ್ಛಿಸುವ ದೇಶಗಳಿಗೆ ತೆರಳಲು ಸುರಕ್ಷಿತ ನಿರ್ಗಮನ ವ್ಯವಸ್ಥೆ.
► ಇದಕ್ಕೆ ಒಪ್ಪಿದ ತಕ್ಷಣ ಗಾಝಾ ಪಟ್ಟಿಗೆ ಪೂರ್ಣ ಪ್ರಮಾಣದ ನೆರವು ಪೂರೈಕೆಗೆ ಕ್ರಮ.
► ಗಾಝಾದಲ್ಲಿ ತಾತ್ಕಾಲಿಕ ಪರಿವರ್ತನೆಯ ಆಡಳಿತ ವ್ಯವಸ್ಥೆ. ಇದರ ಮೇಲುಸ್ತುವಾರಿಯನ್ನು ಟ್ರಂಪ್ ಅಧ್ಯಕ್ಷತೆಯ ` ಶಾಂತಿ ಮಂಡಳಿ' ನಿರ್ವಹಿಸುತ್ತದೆ. ಉಳಿದ ಸದಸ್ಯರನ್ನು ಶೀಘ್ರ ಘೋಷಿಸಲಾಗುವುದು.
► ಗಾಝಾದ ಆಡಳಿತದಲ್ಲಿ ಹಮಾಸ್ ಅಥವಾ ಇತರ ಬಣಗಳು ನೇರ ಅಥವಾ ಪರೋಕ್ಷವಾಗಿ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ . ಸುರಂಗಗಳು, ಆಯುಧ ಉತ್ಪಾದಿಸುವ ವ್ಯವಸ್ಥೆಗಳನ್ನು ನಾಶಗೊಳಿಸಲಾಗುವುದು.