ಗಾಝಾ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಟ್ರಂಪ್ ಹಾಗೂ ಪ್ರಾದೇಶಿಕ ನಾಯಕರು
ಶರ್ಮ್ ಅಲ್-ಶೇಖ್ ನಲ್ಲಿ ಐತಿಹಾಸಿಕ ಶಾಂತಿ ಶೃಂಗಸಭೆ; ಟ್ರಂಪ್ ಗೆ ಈಜಿಪ್ಟ್ ನ ಅತ್ಯುನ್ನತ ನಾಗರಿಕ ಗೌರವ
ಡೊನಾಲ್ಡ್ ಟ್ರಂಪ್ | PHOTO CREDIT : X
ಶರ್ಮ್ ಅಲ್-ಶೇಖ್, ಅ. 13: ಮಧ್ಯ ಪ್ರಾಚ್ಯದಲ್ಲಿ ಹಲವು ದಶಕಗಳಿಂದ ಮುಂದುವರಿದ ಹಿಂಸಾಚಾರ ಮತ್ತು ಸಂಘರ್ಷಗಳಿಗೆ ತೆರೆ ಎಳೆಯುವ ಪ್ರಯತ್ನದ ಭಾಗವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ಶರ್ಮ್ ಅಲ್-ಶೇಖ್ ನಲ್ಲಿ ನಡೆದ ಐತಿಹಾಸಿಕ ಶಾಂತಿ ಶೃಂಗಸಭೆಯಲ್ಲಿ ಗಾಝಾ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಮಹತ್ವದ ದಾಖಲೆಗೆ ಟ್ರಂಪ್ ಅವರೊಂದಿಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಹಾಗೂ ಖತರ್ ಅಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಸಹಿ ಹಾಕಿದರು. ಸಹಿ ಹಾಕಲಾದ ಒಪ್ಪಂದದ ಸಂಪೂರ್ಣ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.
“ಯುದ್ಧ ಇಲ್ಲಿಗೆ ನಿಲ್ಲಲಿದೆ,” ಎಂದು ಟ್ರಂಪ್ ತಮ್ಮ ಆರಂಭಿಕ ಹೇಳಿಕೆಯಲ್ಲಿ ಘೋಷಿಸಿದರು. ಗಾಝಾದಲ್ಲಿ ಕದನ ವಿರಾಮ “ನಂಬಲಾಗದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಶ್ಲಾಘಿಸಿದರು. “ಈ ಹಂತಕ್ಕೆ ಬರಲು ತುಂಬಾ ಸಮಯ ಹಿಡಿಯಿತು. ನಾವು ಅತಿ ಸಮಗ್ರ ಮತ್ತು ವಿಶ್ಲೇಷಿತ ದಾಖಲೆಗೇ ಸಹಿ ಹಾಕುತ್ತಿದ್ದೇವೆ,” ಎಂದು ಹೇಳಿದರು.
ಟ್ರಂಪ್ ಈ ಒಪ್ಪಂದವನ್ನು “ಐತಿಹಾಸಿಕ ಕ್ಷಣ”ವೆಂದು ವಿಶ್ಲೇಷಿಸಿದರು. “ವರ್ಷಗಳ ನೋವು ಮತ್ತು ರಕ್ತಪಾತದ ನಂತರ ಗಾಝಾದಲ್ಲಿ ಯುದ್ಧ ಕೊನೆಗೊಂಡಿದೆ. ಮಾನವೀಯ ನೆರವು ಈಗ ವ್ಯಾಪಕವಾಗಿ ಹರಿದು ಬರುತ್ತಿದೆ. ನೂರಾರು ಟ್ರಕ್‌ಗಳಲ್ಲಿ ಆಹಾರ, ಔಷಧಿ ಮತ್ತು ಅವಶ್ಯಕ ವಸ್ತುಗಳು ಗಾಝಾಕ್ಕೆ ಸಾಗುತ್ತಿವೆ. ನಾಗರಿಕರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ, ಒತ್ತೆಯಾಳುಗಳು ಕುಟುಂಬಗಳೊಂದಿಗೆ ಪುನಃ ಒಂದಾಗುತ್ತಿದ್ದಾರೆ.
“ಹೊಸ ಮತ್ತು ಸುಂದರ ದಿನವೊಂದು ಉದಯಿಸುತ್ತಿದೆ. ಪುನರ್‌ನಿರ್ಮಾಣದ ಪ್ರಕ್ರಿಯೆ ಈಗ ಪ್ರಾರಂಭವಾಗಲಿದೆ,” ಎಂದು ಟ್ರಂಪ್ ಹೇಳಿದರು. ಈ ಪ್ರಗತಿಯನ್ನು ಸಾಧ್ಯವಾಗಿಸಿದ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಮಧ್ಯವರ್ತಿಗಳಾಗಿ ಪ್ರಮುಖ ಪಾತ್ರವಹಿಸಿದ ಈಜಿಪ್ಟ್ ಮತ್ತು ಖತರ್ ಸರ್ಕಾರಗಳಿಗೆ ಟ್ರಂಪ್ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು. ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವ “ನೈಲ್‌ನ ಗೌರವ” ಪ್ರಶಸ್ತಿಯನ್ನು ನೀಡಿದಕ್ಕಾಗಿ ಅಲ್-ಸಿಸಿಗೆ ಧನ್ಯವಾದ ಅರ್ಪಿಸಿದ ಅವರು, ಖತರ್ ಅಮಿರ್ ಶೇಖ್ ತಮೀಮ್ ಅವರನ್ನು “ಅದ್ಭುತ ಹೃದಯದ ನಾಯಕ” ಎಂದು ಹೊಗಳಿದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರ ಭಾಷಣದ ನಂತರ ಟ್ರಂಪ್ ಮತ್ತೊಮ್ಮೆ ವೇದಿಕೆಗೆ ಬಂದು,“ಕೇವಲ 20 ನಿಮಿಷಗಳ ಸೂಚನೆಯಲ್ಲಿಯೇ ಶೃಂಗಸಭೆಗೆ ಆಗಮಿಸಿದ ವಿಶ್ವ ನಾಯಕರ ಬದ್ಧತೆ, ಈ ಶಾಂತಿ ಪ್ರಯತ್ನದ ಮಹತ್ವವನ್ನು ತೋರಿಸುತ್ತದೆ,” ಎಂದು ಹೇಳಿದರು.
“ಇದು ಶಾಶ್ವತ ಬದಲಾವಣೆಯ ಪ್ರಾರಂಭ. ಈ ದಿನ ಇತಿಹಾಸದಲ್ಲಿ ಚಿರಸ್ಮರಣೀಯವಾಗಿ ಉಳಿಯಲಿದೆ,” ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.