×
Ad

ಭಾರತದ ಮೇಲಿನ ಸುಂಕದಲ್ಲಿ ಶೇ. 26 ರಿಯಾಯ್ತಿ ಘೋಷಿಸಿದ ಟ್ರಂಪ್!

Update: 2025-04-03 09:00 IST

PC: x.com/howardlutnick

ವಾಷಿಂಗ್ಟನ್: ಬಹುನಿರೀಕ್ಷಿತ ಸುಂಕ ನೀತಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪ್ರಕಟಿಸಿದ್ದು, ಭಾರತದ ಮೇಲೆ ಪ್ರತೀಕಾರಾತ್ಮಕವಾಗಿ ಹೇರಿದ ಸುಂಕದಲ್ಲಿ ಶೇಕಡ 26ರಷ್ಟು ರಿಯಾಯ್ತಿ ಘೋಷಿಸಿದ್ದಾರೆ. ರೋಸ್ ಗಾರ್ಡನ್ ನಲ್ಲಿ ನಡೆದ "ಮೇಕ್ ಅಮೆರಿಕ ವೆಲ್ದಿ ಅಗೈನ್" ಸಮಾರಂಭದಲ್ಲಿ ಮಾತನಾಡಿದ ಅವರು, ಇದೀಗ ವಿಧಿಸುತ್ತಿರುವ ಶುಲ್ಕಗಳು ಸಂಪೂರ್ಣ ಪ್ರತೀಕಾರಾತ್ಮಕ ಸ್ವರೂಪದ್ದಲ್ಲ" ಎಂದು ಸಮರ್ಥಿಸಿಕೊಂಡರು.

"ಈ ವಿಮೋಚನಾ ದಿನ ಬಹುನಿರೀಕ್ಷಿತ ಕ್ಷಣ. 2025ರ ಏಪ್ರಿಲ್ 2ನ್ನು ಅಮೆರಿಕದ ಕೈಗಾರಿಕೆಗಳು ಮರುಹುಟ್ಟು ಪಡೆದ ದಿನವನ್ನಾಗಿ ಸದಾ ನೆನಪಿಸಿಕೊಳ್ಳಬೇಕು. ಅಮೆರಿಕದ ಭವಿಷ್ಯದ ಪುನರುತ್ಥಾನದ ದಿನ, ಅಮೆರಿಕವನ್ನು ಮತ್ತೆ ಸಮೃದ್ಧ ರಾಷ್ಟ್ರವನ್ನಾಗಿಸುವುದನ್ನು ಪ್ರಾರಂಭ ಮಾಡುವ ದಿನ. ನಾವು ದೇಶವನ್ನು ಸಮೃದ್ಧ, ಉತ್ತಮ ಹಾಗೂ ಸಂಪದ್ಭರಿತ ರಾಷ್ಟ್ರವನ್ನಾಗಿ ಮಾಡುತ್ತೇವೆ" ಎಂದು ಟ್ರಂಪ್ ಘೋಷಿಸಿದರು.

ತಮ್ಮ ಭಾಷಣದ ವೇಳೆ ಭಾರತ, ಚೀನಾ, ಬ್ರಿಟನ್, ಯೂರೋಪಿಯನ್ ಒಕ್ಕೂಟ ಸೇರಿದಂತೆ ವಿವಿಧ ದೇಶಗಳು ವಿಧಿಸುವ ಸುಂಕಗಳ ಚಾರ್ಟ್ ಪ್ರದರ್ಶಿಸಿದ ಟ್ರಂಪ್, ಇದರ ಜತೆಜತೆಗೆ ದೇಶಗಳು ಎದುರಿಸಲಿರುವ ಹೊಸ ಪ್ರತೀಕಾರಾತ್ಮಕ ಸುಂಕದ ಪಟ್ಟಿಯನ್ನೂ ಪ್ರದರ್ಶಿಸಿದರು.

ಕರೆನ್ಸಿ ಪರಿವರ್ತನೆ ಮತ್ತು ವ್ಯಾಪಾರ ತಡೆ ವಿರುದ್ಧದ ಸುಂಕ ಸೇರಿದಂತೆ ಭಾರತ ಶೇಕಡ 52ರಷ್ಟು ಸುಂಕ ವಿಧಿಸುತ್ತದೆ ಎಂದು ಪ್ರದರ್ಶಿಸಿದ ಟ್ರಂಪ್, ಇದಕ್ಕೆ ಪ್ರತಿಯಾಗಿ ಅಮೆರಿಕ ಇದೀಗ ರಿಯಾಯ್ತಿ ಪೂರ್ವಕ ಪ್ರತೀಕಾರ ಸುಂಕವಾಗಿ 26% ವಿಧಿಸುತ್ತದೆ ಎಂದರು.

"ಭಾರತದ ವಿಚಾರ ಅತ್ಯಂತ ಕಠಿಣ. ಪ್ರಧಾನಿ ಇತ್ತೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿ ವಾಪಸ್ಸಾಗಿದ್ದಾರೆ. ಅವರು ನನ್ನ ಒಳ್ಳೆಯ ಸ್ನೇಹಿತ. ನೀವು ನನ್ನ ಸ್ನೇಹಿತ; ಆದರೆ ನೀವು ನಮ್ಮನ್ನು ಸೂಕ್ತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅವರಿಗೆ ಹೇಳಿದ್ದೇನೆ. ಅವರು ನಮಗೆ ಶೇಕಡ 52ರಷ್ಟು ಸುಂಕ ವಿಧಿಸುತ್ತಾರೆ. ಹಲವು ವರ್ಷಗಳಿಂದ, ದಶಕಗಳಿಂದ ನಾವು ನಿಮ್ಮ ಮೇಲೆ ಏನನ್ನೂ ವಿಧಿಸಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಏಳು ವರ್ಷದ ಹಿಂದೆ ನಾನು ಬಂದಾಗಿನಿಂದ ಚೀನಾ ಜತೆಗೆ ನಾವು ಸುಂಕ ವಿಧಿಸಲು ಆರಂಭಿಸಿದ್ದೇವೆ" ಎಂದು ವಿವರಿಸಿದರು.

ವಾಹನಗಳ ಮೇಲೆ ಅಮೆರಿಕ ಶೇಕಡ 2.4ರಷ್ಟು ಮಾತ್ರ ಸುಂಕ ವಿಧಿಸುತ್ತದೆ. ಥಾಯ್ಲೆಂಡ್ ಹಾಗೂ ಇತರ ದೇಶಗಳು ಶೇಕಡ 60ರಷ್ಟು ವಿಧಿಸುತ್ತವೆ. ಭಾರತ ಶೇಕಡ 70ರಷ್ಟು, ವಿಯೇಟ್ನಾಂ ಶೇಕಡ 75ರಷ್ಟು ಸುಂಕ ವಿಧಿಸುತ್ತದೆ. ಇತರ ದೇಶಗಳು ಇನ್ನೂ ಅಧಿಕ ಸುಂಕ ವಿಧಿಸುತ್ತವೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News