×
Ad

ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಟ್ರಂಪ್ ಆಪ್ತ ನೇಮಕ

Update: 2025-08-23 09:59 IST

PC: x.com/DcWalaDesi

ವಾಷಿಂಗ್ಟನ್: ಟ್ರಂಪ್ ಆಪ್ತ, ಶ್ವೇತಭನದಲ್ಲಿ ಅಧ್ಯಕ್ಷೀಯ ಸಿಬ್ಬಂದಿಯ ನಿರ್ದೇಶಕರಾಗಿ ನಿರ್ವಹಿಸುತ್ತಿದ್ದ ಟಾಷ್ಕೆಂಟ್ ಸಂಜಾತ ಸೆರ್ಗಿಯೊ ಗೋರ್ ಅವರನ್ನು ಭಾರತದಲ್ಲಿ ಅಮೆರಿಕದ ರಾಯಭಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಸೆನೆಟ್ ಅನುಮೋದನೆ ನೀಡಿದರೆ ಗೋರ್ ಅವರು ಹಾಲಿ ಹೊಂದಿರುವ ದಕ್ಷಿಣ ಮತ್ತು ಕೇಂದ್ರ ಏಷ್ಯನ್ ವ್ಯವಹಾರಗಳ ವಿಶೇಷ ಪ್ರತಿನಿಧಿ ಹುದ್ದೆಯಲ್ಲೂ ಮುಂದುವರಿಯಲಿದ್ದಾರೆ. ಈ ಪ್ರದೇಶದಲ್ಲಿ ಅಮೆರಿಕ ರಾಯಭಾರಿಗಳನ್ನು ಹೊಂದಿಲ್ಲದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತಿತರ ದೇಶಗಳು ಸೇರಿವೆ.

"ವಿಶ್ವದ ಗರಿಷ್ಠ ಜನಸಂಖ್ಯೆ ಇರುವ ಪ್ರದೇಶಕ್ಕೆ "ಮೇಕ್ ಅಮೆರಿಕ ಗ್ರೇಟ್ ಅಗೈನ್" ಎಂಬ ನನ್ನ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಾರೆ ಎಂಬ ವಿಶ್ವಾಸವಿರುವವರನ್ನೇ ಹೊಂದಿರುವುದು ಅಗತ್ಯ. ಸೆರ್ಗಿಯೊ ನಂಬಲಸಾಧ್ಯ ರಾಯಭಾರಿಯಾಗಲಿದ್ದಾರೆ" ಎಂದು ಟ್ರಂಪ್ ಜಾಲತಾಣ ಪೋಸ್ಟ್ ನಲ್ಲಿ ಹೇಳಿದ್ದಾರೆ. "ನನ್ನ ಅತ್ಯಂತ ಆಪ್ತ ಸ್ನೇಹಿತ; ಹಲವು ವರ್ಷಗಳಿಂದ ನನ್ನ ಜತೆಗಿರುವ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ.

ಗೋರ್ 39 ವರ್ಷ ವಯಸ್ಸಿನವರಾಗಿದ್ದು, ಭಾರತಕ್ಕೆ ಅತ್ಯಂತ ಯುವ ಅಮೆರಿಕನ್ ರಾಯಭಾರಿ ಎನಿಸಿಕೊಳ್ಳಲಿದ್ದಾರೆ. ಡೆಮಾಕ್ರಟಿಕ್ ಪಕ್ಷ ನೇಮಕ ಮಾಡಿದ್ದ ಎರಿಕ್ ಗರ್ಸೆಟ್ಟಿಯವರ ಹುದ್ದೆಯನ್ನು ಗೋರ್ ನವದೆಹಲಿಯಲ್ಲಿ ವಹಿಸಿಕೊಳ್ಳಲಿದ್ದಾರೆ. ಬೈಡನ್ ಆಡಳಿತದ ಕೊನೆಯಲ್ಲಿ ಗರ್ಸೆಟ್ಟಿ ಕ್ಯಾಲಿಫೋರ್ನಿಯಾಗೆ ವಾಪಸ್ಸಾಗಿದ್ದರು.

ಸದ್ದುಗದ್ದಲವಿಲ್ಲದೇ ಶ್ವೇತಭವನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗೋರ್, 4000 ಮಂದಿ ಅಮೆರಿಕ ಮೊದಲು ಎಂಬ ದೇಶಭಕ್ತರನ್ನು ಫೆಡರಲ್ ಸರ್ಕಾರದ ವಿವಿಧ ಇಲಾಖೆಗಳಿಗೆ ದಾಖಲೆ ಅವಧಿಯಲ್ಲಿ ನೇಮಕ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News