"ಬಿಳಿ ಜನಾಂಗೀಯ ರೈತರ ಹತ್ಯೆಯನ್ನು ತಡೆಯಲು ವಿಫಲವಾಗಿದ್ದೀರಿ": ಶ್ವೇತಭವನದಲ್ಲಿ ಮುಖಾಮುಖಿ ಭೇಟಿ ವೇಳೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಿಗೆ ಟ್ರಂಪ್ ತರಾಟೆ
Photo credit: (Evan Vucci/AP)
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ಬಿಳಿ ಜನಾಂಗೀಯ ರೈತರ ಹತ್ಯೆಯನ್ನು ತಡೆಯಲು ವಿಫಲವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರನ್ನು ತರಾಟೆಗೆ ತೆಗೆದುಕೊಂಡರು. ಆದರೆ ದಕ್ಷಿಣ ಆಫ್ರಿಕಾ ಈ ಹೇಳಿಕೆಯನ್ನು ಸುಳ್ಳು ಮತ್ತು ದಾರಿತಪ್ಪಿಸುವಂತಿದೆ ಎಂದು ತಿರಸ್ಕರಿಸಿದೆ.
ಓವಲ್ ಕಚೇರಿಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಮಾಡಿದರು. ಮಾತುಕತೆಯ ವೇಳೆ ಜನರು ತಮ್ಮ ಸುರಕ್ಷತೆಗಾಗಿ ದಕ್ಷಿಣ ಆಫ್ರಿಕಾದಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು. ಕಮ್ಯುನಿಸ್ಟ್ ರಾಜಕಾರಣಿಯೊಬ್ಬರು ವಿವಾದಾತ್ಮಕ ವರ್ಣಭೇದ ನೀತಿ ವಿರೋಧಿ ಹಾಡನ್ನು ನುಡಿಸುತ್ತಿರುವ ವೀಡಿಯೊವನ್ನು ಓವಲ್ ಕಚೇರಿಯಲ್ಲಿ ಪ್ಲೇ ಮಾಡಿದರು. ಆ ಹಾಡಿನಲ್ಲಿ ರೈತನನ್ನು ಕೊಲ್ಲುವ ಬಗ್ಗೆ ಸಾಹಿತ್ಯವಿದೆ. ಅವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಮತ್ತು ಅವರನ್ನು ಕೊಲೆ ಮಾಡಲಾಗುತ್ತಿದೆ ಎಂದು ಟ್ರಂಪ್ ಆರೋಪಿಸಿದರು.
ದಕ್ಷಿಣ ಆಫ್ರಿಕಾ ಬಿಳಿಯ ಭೂಮಾಲೀಕರ ವಿರುದ್ಧ ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿದೆ ಎಂದು ಟ್ರಂಪ್ ಬಹಳ ಹಿಂದಿನಿಂದಲೂ ಆರೋಪಿಸುತ್ತಿದ್ದಾರೆ ಮತ್ತು ಅಲ್ಲಿನ ಭೂಸುಧಾರಣಾ ನೀತಿಗಳನ್ನು ಟೀಕಿಸಿದ್ದಾರೆ. ಜನಾಂಗೀಯ ತಾರತಮ್ಯವನ್ನು ಆರೋಪಿಸಿ ಅವರು ದಕ್ಷಿಣ ಆಫ್ರಿಕಾಕ್ಕೆ ಅಮೆರಿಕದ ಸಹಾಯವನ್ನು ರದ್ದುಗೊಳಿಸಿದ್ದರು. ರಾಯಭಾರಿಯನ್ನು ಅಮೆರಿಕದಿಂದ ವಾಪಾಸ್ಸು ಕಳಹಿಸಿದ್ದರು.
ಟ್ರಂಪ್ ಅವರ ಆರೋಪವನ್ನು ಬಲವಾಗಿ ತಿರಸ್ಕರಿಸಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಫೋಸಾ, ಅಮೆರಿಕದೊಂದಿಗಿನ ತನ್ನ ದೇಶದ ಸಂಬಂಧವನ್ನು ಬಲಪಡಿಸುವ ದೃಷ್ಠಿಯಿಂದ ಮಾತುಕತೆಗೆ ಪ್ರಯತ್ನಿಸಿದರು.