ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಸಂಸದನಿಂದ ಟ್ರಂಪ್ ನಾಮನಿರ್ದೇಶನ!
ಡೊನಾಲ್ಡ್ ಟ್ರಂಪ್ | PC : X
ವಾಷಿಂಗ್ಟನ್: ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮವೇರ್ಪಡಲು ಮಧ್ಯಸ್ಥಿಕೆ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಸಂಸದರೊಬ್ಬರು ನಾಮನಿರ್ದೇಶನ ಮಾಡಿದ್ದಾರೆ ಎಂದು 'ಫಾಕ್ಸ್ ನ್ಯೂಸ್' ವರದಿ ಮಾಡಿದೆ.
ಈ ಕುರಿತು ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಗೆ ಪತ್ರ ಬರೆದಿರುವ ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಬಡ್ಡಿ ಕಾರ್ಟರ್, "ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಕೊನೆಗಾಣಿಸುವಲ್ಲಿ ಹಾಗೂ ಇರಾನ್ ಅತ್ಯಂತ ಮಾರಕ ಆಯುಧ ಹೊಂದುವುದನ್ನು ತಡೆಯುವಲ್ಲಿ ಟ್ರಂಪ್ ಅಸಾಧಾರಣ ಮತ್ತು ಐತಿಹಾಸಿಕ ಪಾತ್ರ ವಹಿಸಿದ್ದಾರೆ" ಎಂದು ಹೇಳಿದ್ದಾರೆ.
"ಅಸಾಧ್ಯವೆಂದು ಹಲವರು ನಂಬಿದ್ದ ಒಪ್ಪಂದವನ್ನು ತ್ವರಿತವಾಗಿ ಏರ್ಪಡಿಸುವಲ್ಲಿ ಟ್ರಂಪ್ ಅವರ ಪ್ರಭಾವ ಪ್ರಮುಖ ಪಾತ್ರ ವಹಿಸಿತು. ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಮಹತ್ವಾಕಾಂಕ್ಷೆಗಳನ್ನು ತಡೆಯಲು ಹಾಗೂ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದು ಅಸಾಧ್ಯವಾಗುವಂತೆ ನೋಡಿಕೊಳ್ಳಲು ಟ್ರಂಪ್ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ" ಎಂದೂ ಅವರು ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
"ಚಾರಿತ್ರಿಕ ದ್ವೇಷ ಹಾಗೂ ರಾಜಕೀಯ ಅಸ್ಥಿರತೆಯಿಂದ ನಲುಗುತ್ತಿರುವ ಪ್ರಾಂತ್ಯದ ಕುರಿತು ಇಂತಹ ತೀರ್ಮಾನ ಕೈಗೊಳ್ಳಲು ಅಸಾಧಾರಣ ಧೈರ್ಯ ಮತ್ತು ಸ್ಪಷ್ಟತೆ ಎರಡನ್ನೂ ಹೊಂದಿರಬೇಕಾಗುತ್ತದೆ. ಈ ಎರಡನ್ನೂ ಪ್ರದರ್ಶಿಸುವ ಮೂಲಕ, ಟ್ರಂಪ್ ಭರವಸೆಯ ಅಪರೂಪದ ದರ್ಶನ ನೀಡಿದರು. ಈ ಕಾರಣಗಳಿಂದಾಗಿ, ಅಮೆರಿಕದ 47ನೇ ಅಧ್ಯಕ್ಷ ಡೊನಾಲ್ಡ್ ಜೆ.ಟ್ರಂಪ್ ಅವರ ಹೆಸರನ್ನು ನಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಗೌರವಯುತವಾಗಿ ಮನವಿ ಮಾಡುತ್ತೇನೆ" ಎಂದು ಅವರು ಈ ಪತ್ರದಲ್ಲಿ ಕೋರಿದ್ದಾರೆ.
ಈ ಹಿಂದೆ ಪಾಕಿಸ್ತಾನ ಕೂಡಾ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು.