ರಶ್ಯ ಬಳಿ ಪರಮಾಣು ಸಬ್ ಮೆರಿನ್ ನಿಯೋಜನೆಗೆ ಟ್ರಂಪ್ ಆದೇಶ
ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ | PC | REUTERS
ವಾಷಿಂಗ್ಟನ್, ಆ.2: ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಅವರ ಅತೀ ಪ್ರಚೋದನಕಾರಿ ಹೇಳಿಕೆಗೆ ಪ್ರತಿಯಾಗಿ ರಶ್ಯದ ಬಳಿ `ಸೂಕ್ತವಾದ ಪ್ರದೇಶದಲ್ಲಿ' ಎರಡು ಪರಮಾಣುಶಕ್ತ ಸಬ್ ಮೆರಿನ್ ಗಳನ್ನು ನಿಯೋಜಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿರುವುದಾಗಿ ವರದಿಯಾಗಿದೆ.
ಮೆಡ್ವೆಡೇವ್ ಈಗ ರಶ್ಯದ ರಾಷ್ಟ್ರೀಯ ಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿದ್ದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಆಪ್ತರಾಗಿದ್ದಾರೆ.
ಪದಗಳು ಬಹು ಮುಖ್ಯವಾಗಿರುತ್ತದೆ ಮತ್ತು ಕೆಲವೊಮ್ಮೆ ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು. ಮೆಡ್ವೆಡೇವ್ ಅವರ ಬೆಂಕಿಯಿಡುವ ಹೇಳಿಕೆಗಳು ಪ್ರತಿಕ್ರಮವನ್ನು ಪ್ರಚೋದಿಸಬಹುದು ' ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೆಡ್ವೆಡೇವ್ ಅವರ ಅತೀ ಪ್ರಚೋದನಕಾರಿ ಹೇಳಿಕೆಯನ್ನು ಗಮನಿಸಿ ಸೂಕ್ತವಾದ ಪ್ರದೇಶದಲ್ಲಿ ಎರಡು ಪರಮಾಣು ಶಕ್ತ ಸಬ್ ಮೆರಿನ್ ಗಳನ್ನು ನಿಯೋಜಿಸಲು ಆದೇಶಿಸಿದ್ದೇನೆ. ಒಂದು ವೇಳೆ ಈ ಮೂರ್ಖ ಮತ್ತು ಪ್ರಚೋದನಕಾರಿ ಹೇಳಿಕೆಗಳಿಗೆ ಬೇರೆಯೇ ಅರ್ಥವಿದ್ದರೆ ನಾವು ಪ್ರತಿಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
*ಮೆಡ್ವೆಡೇವ್ -ಟ್ರಂಪ್ ವಾಗ್ದಾಳಿ
ಟ್ರಂಪ್ ಮತ್ತು ಮೆಡ್ವೆಡೇವ್ ನಡುವೆ ಈ ವಾರ ಮಾತಿನ ಚಕಮಕಿ ತೀವ್ರಗೊಂಡಿದೆ. ಭಾರತ ಮತ್ತು ರಶ್ಯಗಳು `ಸತ್ತ ಆರ್ಥಿಕತೆಯನ್ನು' ಹೊಂದಿವೆ ಎಂದು ಟ್ರಂಪ್ ಲೇವಡಿ ಮಾಡಿದ್ದರು ಮತ್ತು ರಶ್ಯದಿಂದ ತೈಲ ಖರೀದಿಸುತ್ತಿರುವ ಭಾರತದ ವಿರುದ್ಧ ಕಠಿಣ ಸುಂಕ ಜಾರಿಗೊಳಿಸಿದ್ದರು.
ಟ್ರಂಪ್ ನಡೆಯನ್ನು ಟೀಕಿಸಿದ್ದ ಮೆಡ್ವೆಡೇವ್ ಶೀತಲ ಯುದ್ಧದ ಅವಧಿಯಲ್ಲಿ ಸೋವಿಯತ್ ಒಕ್ಕೂಟದಲ್ಲಿ `ಅಗೋಚರ ಹಸ್ತ' ಎಂದು ಕರೆಯಲಾಗುತ್ತಿದ್ದ ಸ್ವಯಂಚಾಲಿತ ಪರಮಾಣು ಪ್ರತೀಕಾರ ವ್ಯವಸ್ಥೆಯನ್ನು ಉಲ್ಲೇಖಿಸಿದ್ದರು. ದಾಳಿಯಲ್ಲಿ ರಶ್ಯದ ನಾಯಕತ್ವವನ್ನು ದುರ್ಬಲಗೊಳಿಸಿದರೆ ಪರಮಾಣು ಶಕ್ತ ಕ್ಷಿಪಣಿಗಳನ್ನು ಪ್ರಯೋಗಿಸಲು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಭಾರತ ಮತ್ತು ರಶ್ಯದ `ಸತ್ತ ಆರ್ಥಿಕತೆಗಳ' ಕುರಿತ ಹೇಳಿಕೆ ಬಗ್ಗೆ ಉಲ್ಲೇಖಿಸುವುದಾದರೆ ಅವರು (ಟ್ರಂಪ್) ತಮ್ಮ ನೆಚ್ಚಿನ ಚಲನಚಿತ್ರ `ದಿ ವಾಕಿಂಗ್ ಡೆಡ್' ಅನ್ನು ನೆನಪಿಸಿಕೊಳ್ಳಲಿ. ಜೊತೆಗೆ `ಅಗೋಚರ ಹಸ್ತ' ಎಷ್ಟು ಅಪಾಯಕಾರಿ ಎಂದು ನೆನಪಿಸಿಕೊಳ್ಳಲಿ. ಅದು ಅಸ್ತಿತ್ವದಲ್ಲಿಲ್ಲ, ಅಸ್ತಿತ್ವಕ್ಕೆ ಬರಬಹುದು' ಎಂದಿದ್ದರು.