ಹೊಂಡುರಾಸ್ ನ ಮಾಜಿ ಅಧ್ಯಕ್ಷರಿಗೆ ಟ್ರಂಪ್ ಕ್ಷಮಾದಾನ: ಅಮೆರಿಕದ ಜೈಲಿನಿಂದ ಬಿಡುಗಡೆ
ಡೊನಾಲ್ಡ್ ಟ್ರಂಪ್ , ಜುವಾನ್ ಒರ್ಲಾಂಡೊ ಹೆರ್ನಾಂಡೆಝ್ | Photo Credit : NDTV
ವಾಶಿಂಗ್ಟನ್,ಡಿ.2: ಅಮೆರಿಕಕ್ಕೆ 400 ಟನ್ ಕೊಕೇನ್ ಮಾದಕದ್ರವ್ಯವನ್ನು ಕಳ್ಳಸಾಗಣೆ ಮಾಡಲು ನೆರವಾದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹೊಂಡುರಾಸ್ ನ ಮಾಜಿ ಅಧ್ಯಕ್ಷ ಜುವಾನ್ ಒರ್ಲಾಂಡೊ ಹೆರ್ನಾಂಡೆಝ್ ಅವರಿಗೆ ಅಧ್ಯಕ್ಷ ಡೊನಾಲ್ಡ್ ಕ್ಷಮಾದಾನ ಘೋಷಿಸಿದ್ದಾರೆ.
ಅಮೆರಿಕದ ವೆಸ್ಟ್ ವರ್ಜೀನಿಯಾದಲ್ಲಿರುವ ಜೈಲಿನಿಂದ ಜುವಾನ್ ಒರ್ಲಾಂಡೊ ಬಿಡುಗಡೆಗೊಂಡಿದ್ದಾರೆ ಹಾಗೂ ಮತ್ತೊಮ್ಮೆ ಸ್ವತಂತ್ರ ವ್ಯಕ್ತಿಯಾಗಿದ್ದಾರೆ ಎಂದು ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.
ಈ ಮಧ್ಯೆ ಅಮೆರಿಕದ ಕಾರಾಗೃಹಗಳ ಇಲಾಖೆಯು, ಜುವಾನ್ ಒರ್ಲಾಂಡೊ ಅವರನ್ನು ಬಿಡುಗಡೆಗೊಳಿಸಿರುವ ಛಾಯಾಚಿತ್ರವನ್ನು ಕೂಡಾ ಪ್ರಕಟಿಸಿದೆ.
ಕೆರಿಬಿಯನ್ ಸಮುದ್ರದಲ್ಲಿ ಮಾದಕದ್ರವ್ಯ ಕಳ್ಳಸಾಗಣೆ ಮಾಡುತ್ತಿವೆಯೆನ್ನಲಾದ ನೌಕೆಗಳ ಮೇಲೆ ಅಮೆರಿಕ ಅಧ್ಯಕ್ಷರು ಏಕಕಾಲದಲ್ಲಿ ಬಾಂಬ್ ದಾಳಿ ನಡೆಸುತ್ತಿರುವ ಸಂದರ್ಭದಲ್ಲೇ ಟ್ರಂಪ್ ಅವರು ಈ ವಿವಾದಾತ್ಮಕ ಕ್ಷಮಾದಾನವನ್ನು ಘೋಷಿಸಿದ್ದಾರೆ.
ಈ ಮಧ್ಯೆ ಹೊಂಡುರಾಸ್ ನಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಜುವಾನ್ ಒರ್ಲಾಂಡೊ ಅವರ ಪಕ್ಷವನ್ನು ಟ್ರಂಪ್ ಬೆಂಬಲಿಸುತ್ತಿದ್ದಾರೆ.
ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ಮಾದಕದ್ರವ್ಯ ಕಳ್ಳಸಾಗಣೆ ಜಾಲದ ವಿರುದ್ಧ ಟ್ರಂಪ್ ಸಮರವನ್ನು ಘೋಷಿಸಿರುವ ಸಂದರ್ಭದಲ್ಲೇ ಒಲಾಂಡೊ ಅವರಿಗೆ ಕ್ಷಮಾದಾನ ಘೋಷಿಸುವ ಮೂಲಕ ಟ್ರಂಪ್ ಅಚ್ಚರಿ ಮೂಡಿಸಿದ್ದಾರೆಂದು ಅಮೆರಿಕದ ಮಾಧ್ಯಮಗಳು ಬಣ್ಣಿಸಿವೆ.