×
Ad

ಉಗಾಂಡದಲ್ಲಿ ವಿಪಕ್ಷಗಳ ದಮನಕ್ಕೆ ವಿಶ್ವಸಂಸ್ಥೆ ಖಂಡನೆ

ಮಾನವ ಹಕ್ಕುಗಳ ಉಲ್ಲಂಘನೆ ಆರೋಪದ ತನಿಖೆಗೆ ಆಗ್ರಹ

Update: 2025-12-03 20:31 IST

Photo Credit : news.un.org

ಜಿನೆವಾ, ಡಿ.3: ಉಗಾಂಡಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ವಿಪಕ್ಷಗಳು ಮತ್ತು ಮಾಧ್ಯಮಗಳ ಮೇಲೆ ತೀವ್ರತರವಾದ ದಮನವನ್ನು ವಿಶ್ವಸಂಸ್ಥೆ ಬುಧವಾರ ಖಂಡಿಸಿದೆ. ಆಪಾದಿತ ಅನಿಯಂತ್ರಿತ ಬಂಧನಗಳು, ಕಣ್ಮರೆಗಳು ಮತ್ತು ಚಿತ್ರಹಿಂಸೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.

ಪ್ರಮುಖ ವಿರೋಧ ಪಕ್ಷ `ನ್ಯಾಷನಲ್ ಯುನಿಟಿ ಪ್ಲ್ಯಾಟ್‍ಫಾರ್ಮ್ ಪಾರ್ಟಿ'(ಎನ್‍ಯುಪಿ)ಯ ಸದಸ್ಯರು, ಬೆಂಬಲಿಗರು ಸೇರಿದಂತೆ ಕನಿಷ್ಠ 550 ಮಂದಿಯನ್ನು ಮತ್ತು ಅಧ್ಯಕ್ಷೀಯ ಅಭ್ಯರ್ಥಿ ಬಾಬಿ ವೈನ್‍ ರನ್ನು ಈ ವರ್ಷದ ಆರಂಭದಿಂದಲೂ ಬಂಧನದಲ್ಲಿ ಇರಿಸಿರುವ ಬಗ್ಗೆ ವಿಶ್ವಾಸಾರ್ಹ ವರದಿಗಳಿವೆ. ಇವರಲ್ಲಿ 300ಕ್ಕೂ ಅಧಿಕ ಜನರನ್ನು ಚುನಾವಣೆಯ ಸೆಪ್ಟಂಬರ್ ತಿಂಗಳಲ್ಲಿ ಪ್ರಚಾರ ಕಾರ್ಯ ಪ್ರಾರಂಭವಾದಾಗಿನಿಂದ ಬಂಧಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ ಹೇಳಿದೆ.

ಬಂಧಿತರಲ್ಲಿ ಹಲವರು ಪೊಲೀಸ್ ಕಸ್ಟಡಿಯಲ್ಲಿದ್ದು ಸಾರ್ವಜನಿಕ ಉಪದ್ರವ, ಕಾನೂನು ಆದೇಶಗಳಿಗೆ ಅವಿಧೇಯತೆ, ಆಕ್ರಮಣ, ಅಡ್ಡಿ ಮತ್ತು ಹಿಂಸಾಚಾರದ ಪ್ರಚೋದನೆ ಮುಂತಾದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಎನ್‍ಯುಪಿ ಚುನಾವಣಾ ರ್ಯಾಲಿ ನಡೆಸಲು ಉದ್ದೇಶಿರುವ ಪ್ರದೇಶಗಳಲ್ಲಿ ಭಾರೀ ಶಸ್ತ್ರಸಜ್ಜಿತ ಪಡೆಗಳನ್ನು ನಿಯೋಜಿಸಲಾಗಿತ್ತು. ಎನ್‍ಯುಪಿ ಬೆಂಬಲಿಗರನ್ನು ಚದುರಿಸಲು ಪಡೆಗಳು ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ, (ಕಿರಿಕಿರಿ ಉಂಟು ಮಾಡುವ) ರಾಸಾಯನಿಕಗಳನ್ನು ಪ್ರಯೋಗಿಸಿದ್ದು ಹಲವರು ಗಾಯಗೊಂಡಿದ್ದಾರೆ. ಪೂರ್ವ ಇಗಾಂಗಾ ನಗರದಲ್ಲಿ ಕಳೆದ ವಾರ ನಡೆದಿದ್ದ ಚುನಾವಣಾ ರ್ಯಾಲಿಯ ಸಂದರ್ಭ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು ಓರ್ವ ವ್ಯಕ್ತಿ ಮೃತಪಟ್ಟಿರುವ ವರದಿಯಿದೆ ಎಂದು ಮಾನವ ಹಕ್ಕುಗಳ ಏಜೆನ್ಸಿ ಹೇಳಿದೆ.

ಚುನಾವಣಾ ಪ್ರಚಾರದ ಸಂದರ್ಭ ಅನಿಯಂತ್ರಿಕ ಬಂಧನಗಳು, ವಿಪಕ್ಷಗಳ ವಿರುದ್ಧ ಅಸಮಾನ ಮತ್ತು ಅನಗತ್ಯ ಬಲವನ್ನು ಬಳಸುತ್ತಿರುವುದು ವಿಷಾದನೀಯವಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದು ಇಂತಹ ದಮನಕಾರಿ ತಂತ್ರಗಳ ಬಳಕೆಯನ್ನು ನಿಲ್ಲಿಸುವಂತೆ ಉಗಾಂಡಾದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕೆಲ ವರ್ಷಗಳಿಂದ ಬಲವಂತದ ನಾಪತ್ತೆಗಳು, ಚಿತ್ರಹಿಂಸೆ ಮತ್ತು ವಿರೋಧ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರ ವಿರುದ್ಧ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿರುವ ಆರೋಪಗಳಿವೆ. ಇದರ ಬಗ್ಗೆ ಸಂಪೂರ್ಣ ಮತ್ತು ಪಾರದರ್ಶಕ ತನಿಖೆ ನಡೆಸಬೇಕು, ನಿರಂಕುಶವಾಗಿ ಬಂಧನಕ್ಕೆ ಒಳಗಾದವರನ್ನು ಬಿಡುಗಡೆಗೊಳಿಸಬೇಕು ಮತ್ತು ಹೊಣೆಗಾರರನ್ನು ಗುರುತಿಸಿ ಶಿಕ್ಷಿಸುವ ಜೊತೆಗೆ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಟರ್ಕ್ ಆಗ್ರಹಿಸಿದ್ದಾರೆ.

ಉಗಾಂಡಾದಲ್ಲಿ ಜನವರಿ 15ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಕಳೆದ 40 ವರ್ಷದಿಂದ ಅಧಿಕಾರದಲ್ಲಿರುವ 81 ವರ್ಷದ ಯೊವೆರಿ ಮುಸೆವಿನಿ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಮತ್ತೆ ಕಣಕ್ಕಿಳಿದ ಸರ್ವಾಧಿಕಾರಿ ಅಧ್ಯಕ್ಷ

ಉಗಾಂಡಾದಲ್ಲಿ 1986ರಿಂದಲೂ ಅಧಿಕಾರದಲ್ಲಿರುವ ಯೊವೆರಿ ಮುಸೆವಿನಿ ಮುಂದಿನ ವರ್ಷದ ಜನವರಿ 15ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದಾಗಿ ದೇಶದ ಚುನಾವಣಾ ಆಯೋಗ ಘೋಷಿಸಿದೆ.

ಮುಸೆವಿನಿ ಅವರ ಆಡಳಿತಾರೂಢ `ನ್ಯಾಷನಲ್ ರೆಸಿಸ್ಟೆನ್ಸ್ ಮೂವ್ಮೆಂಟ್' ಪಕ್ಷ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅತೀ ಹೆಚ್ಚಿನ ಸ್ಥಾನಗಳನ್ನು ಹೊಂದಿದೆ. 2017ರಲ್ಲಿ ರಾಷ್ಟ್ರೀಯ ಅಸೆಂಬ್ಲಿಯು ಅಧ್ಯಕ್ಷರಿಗೆ ಸಾಂವಿಧಾನಿಕ ವಯೋಮಿತಿಯನ್ನು ರದ್ದುಗೊಳಿಸಿದ್ದರಿಂದ 81 ವರ್ಷದ ಮುಸೆವಿನಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಅವಕಾಶ ನೀಡಿದಂತಾಗಿದೆ. ಅವರ ಪುತ್ರ ದೇಶದ ಮಿಲಿಟರಿಯ ಮುಖ್ಯಸ್ಥನಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News