×
Ad

ಅಮೆರಿಕ | ಟೆಕ್ಸಾಸ್‌ ನಲ್ಲಿ ಹನುಮಂತ ದೇವರ ಪ್ರತಿಮೆಗೆ ಅವಹೇಳನ; ಟ್ರಂಪ್ ಪಕ್ಷದ ನಾಯಕನ ವಿರುದ್ಧ ಆಕ್ರೋಶ

Update: 2025-09-24 23:09 IST

PC : economictimes.indiatimes.com

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ ನಲ್ಲಿ ಸ್ಥಾಪಿಸಲಾದ 90 ಅಡಿ ಎತ್ತರದ ಹನುಮಂತ ದೇವರ ಪ್ರತಿಮೆಯನ್ನು “ಸುಳ್ಳು ಹಿಂದೂ ದೇವರ ಪ್ರತಿಮೆ” ಎಂದು ಅವಹೇಳನ ಮಾಡಿದ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ನಾಯಕ ಅಲೆಕ್ಸಾಂಡರ್ ಡಂಕನ್ ವಿರುದ್ಧ ಭಾರತೀಯ-ಅಮೆರಿಕನ್ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಟೆಕ್ಸಾಸ್ ಸೆನೆಟ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡಂಕನ್, ಕಳೆದ ಆಗಸ್ಟ್‌ನಲ್ಲಿ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಅನಾವರಣಗೊಂಡ ಪ್ರತಿಮೆಯ ವೀಡಿಯೊ ಹಂಚಿಕೊಂಡು, “ನಮ್ಮದು ಕ್ರಿಶ್ಚಿಯನ್ ರಾಷ್ಟ್ರ, ಇಂತಹ ಸುಳ್ಳು ದೇವರ ಪ್ರತಿಮೆ ಟೆಕ್ಸಾಸ್‌ನಲ್ಲಿ ಏಕೆ?” ಎಂದು ಟ್ವೀಟ್ ಮಾಡಿದ್ದರು.

ಬಳಿಕ ಬೈಬಲ್‌ನ ವಾಕ್ಯವನ್ನು ಉಲ್ಲೇಖಿಸಿ “ನನ್ನ ಹೊರತು ಬೇರೆ ದೇವರನ್ನು ಪೂಜಿಸಬಾರದು, ಯಾವುದೇ ವಿಗ್ರಹ ಪೂಜೆ ಮಾಡಬಾರದು” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗಳನ್ನು ಹಿಂದೂ ಅಮೆರಿಕನ್ ಫೌಂಡೇಶನ್‌ (HAF) “ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ” ಎಂದು ಖಂಡಿಸಿದೆ. ಜೊತೆಗೆ, ಪಕ್ಷದ ಧರ್ಮನಿರಪೇಕ್ಷ ಮಾರ್ಗಸೂಚಿ ಮತ್ತು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿಯನ್ನು ಡಂಕನ್ ಉಲ್ಲಂಘಿಸಿರುವುದಾಗಿ ಆರೋಪಿಸಿದೆ. ಅವರ ವಿರುದ್ಧ ಟೆಕ್ಸಾಸ್ GOP ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಈ ಕುರಿತು ನಿರಾಶೆ ವ್ಯಕ್ತಪಡಿಸಿದ ಭಾರತೀಯ ಮೂಲದ ಉದ್ಯಮಿ ತಪೇಶ್ ಯಾದವ್, “ನಾನು ರಿಪಬ್ಲಿಕನ್ ಪಕ್ಷವನ್ನು ಬೆಂಬಲಿಸುತ್ತ, ಡಂಕನ್ ಅವರ ಹೇಳಿಕೆಗಳು ಸ್ವಾತಂತ್ರ್ಯ ಮತ್ತು ಸಮಾನ ಅವಕಾಶದ ತತ್ವಗಳಿಗೆ ವಿರುದ್ಧವಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಉತ್ತರ ಅಮೆರಿಕದ ಅತಿ ಎತ್ತರ ಹನುಮಂತ ಪ್ರತಿಮೆ ಅನಾವರಣವಾದ ಬಳಿಕ, ಟ್ರಂಪ್ ಬೆಂಬಲಿಗರಲ್ಲಿ ಕೆಲವರು ಇದನ್ನು “ರಾಕ್ಷಸ” ಹಾಗೂ “ವಿದೇಶಿ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ವರದಿ ಮಾಡುವಾಗ ಅಲ್ಲಿನ ಮಾಧ್ಯಮಗಳು ಸೂಕ್ಷ್ಮತೆ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ನ್ಯೂಸ್‌ವೀಕ್ ಪತ್ರಿಕೆಯಲ್ಲಿ ಪ್ರಕಟವಾದ “ಅರ್ಧ ಮಂಗ, ಅರ್ಧ ಮಾನವ ಪ್ರತಿಮೆ ಸಂಪ್ರದಾಯವಾದಿಗಳಿಂದ ಟೀಕೆಗೆ ಗುರಿಯಾಗಿದೆ ” ಎಂಬ ಶೀರ್ಷಿಕೆಗೂ ಹಿಂದೂ ಸಂಘಟನೆಗಳಿಂದ ಖಂಡನೆ ವ್ಯಕ್ತವಾಗಿದೆ.

ಈ ಘಟನೆ ಭಾರತೀಯ ಮೂಲದ ಮತದಾರರ ಅಸಮಾಧಾನಕ್ಕೆ ಕಾರಣವಾಗಿದ್ದು, ಮುಂಬರುವ 2024ರ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಸವಾಲಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News