ಪ್ರಶಸ್ತಿಯನ್ನು ನನಗೆ ಕೊಡಿ ಎಂದು ಹೇಳಿಲ್ಲ : ನೊಬೆಲ್ ಪ್ರಶಸ್ತಿ ಕೈತಪ್ಪಿದ ಬಳಿಕ ಟ್ರಂಪ್ ಪ್ರತಿಕ್ರಿಯೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಶಿಂಗ್ಟನ್ : ನೊಬೆಲ್ ಪ್ರಶಸ್ತಿ ವಿಜೇತ ಮರಿಯಾ ಕೊರಿನಾ ಮಚಾದೊ ನನಗೆ ಕರೆ ಮಾಡಿದರು. ಈ ವೇಳೆ ಪ್ರಶಸ್ತಿಯನ್ನು ನನಗೆ ಕೊಡಿ ಎಂದು ನಾನು ಹೇಳಲಿಲ್ಲ ಎಂದು ನೊಬೆಲ್ ಕೈತಪ್ಪಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನೊಬೆಲ್ ಬಗ್ಗೆ ಕೇಳಿದಾಗ, ಟ್ರಂಪ್ ಸಮಿತಿಯ ನಿರ್ಧಾರವನ್ನು ನೇರವಾಗಿ ಟೀಕಿಸಲಿಲ್ಲ, ಆದರೆ ಹಲವಾರು ಯುದ್ಧಗಳನ್ನು ನಿಲ್ಲಿಸಿದ್ದಕ್ಕೆ ಸ್ವತಃ ತನಗೆ ತಾನೇ ಕೃತಜ್ಞತೆ ಸಲ್ಲಿಸಿದರು.
"ನೊಬೆಲ್ ಪ್ರಶಸ್ತಿ ಪಡೆದ ವೆನೆಝುವೆಲಾದ ಮರಿಯಾ ಕೊರಿನಾ ಮಚಾದೊ ಅವರು ಇಂದು ನನಗೆ ಕರೆ ಮಾಡಿ, ನೀವು ಇದಕ್ಕೆ ಅರ್ಹರು ಎಂಬ ಕಾರಣಕ್ಕೆ ನಾನು ಇದನ್ನು ನಿಮ್ಮ ಗೌರವಾರ್ಥವಾಗಿ ಸ್ವೀಕರಿಸುತ್ತಿದ್ದೇನೆ' ಎಂದು ಹೇಳಿದರು, ನಾನು ಆಗ 'ಅದನ್ನು ನನಗೆ ಕೊಡಿ' ಎಂದು ಹೇಳಲಿಲ್ಲ. ಅವರು ತುಂಬಾ ಒಳ್ಳೆಯವರು" ಎಂದು ಟ್ರಂಪ್ ಹೇಳಿದರು.
ವೆನೆಝುವೆಲಾದ ಮರಿಯಾ ಕೊರಿನಾ ಮಚಾದೊ ಅವರಿಗೆ ಪ್ರಶಸ್ತಿ ನೀಡಿದ್ದಕ್ಕಾಗಿ ನೊಬೆಲ್ ಸಮಿತಿಯು “ಶಾಂತಿಗಿಂತ ರಾಜಕೀಯಕ್ಕೇ ಪ್ರಾಮುಖ್ಯತೆ ನೀಡಿದೆ” ಎಂದು ಶ್ವೇತ ಭವನ ಹೇಳಿತ್ತು. ಇದರ ಬೆನ್ನಲ್ಲೇ ಟ್ರಂಪ್ ಹೇಳಿಕೆ ಹೊರ ಬಿದ್ದಿದೆ.
ವಿಪತ್ತಿನ ಸಮಯದಲ್ಲಿ ವೆನೆಝುವೆಲಾದಲ್ಲಿ ಅವರಿಗೆ ಬಹಳಷ್ಟು ಸಹಾಯದ ಅಗತ್ಯವಿತ್ತು. ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದರಿಂದ ನನಗೆ ಸಂತೋಷವಾಗಿದೆ. ಮುಂದಿನ ವರ್ಷ ಅದನ್ನು ಪಡೆಯುವ ಭರವಸೆ ಇದೆ ಎಂದು ಟ್ರಂಪ್ ಹೇಳಿದರು.