ಗಾಝಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ: ಟ್ರಂಪ್ ಘೋಷಣೆ
Photo: PTI
ವಾಷಿಂಗ್ಟನ್: ಗಾಝಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಸಂಘರ್ಷದ ನಡುವೆ ಶಾಂತಿಯತ್ತ ತಾತ್ಕಾಲಿಕ ಹೆಜ್ಜೆ ಇಡಲಾಗಿದ್ದು, ಇಸ್ರೇಲ್ 60 ದಿನಗಳ ಕಾಲ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
"60 ದಿನಗಳ ಕಾಲ ಗಾಝಾದಲ್ಲಿ ಕದನ ವಿರಾಮ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಶಾಶ್ವತ ಶಾಂತಿ ಸಾಧಿಸಲು ಎಲ್ಲರೊಂದಿಗೆ ನಾವು ಶ್ರಮಿಸೋಣ, ಶಾಂತಿ ನಮ್ಮ ಮುಂದಿನ ಗುರಿಯಾಗಿದೆ", ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
"ಖತರ್ ಮತ್ತು ಈಜಿಪ್ಟ್ ಶಾಂತಿ ಪ್ರಕ್ರಿಯೆಗೆ ಶ್ರಮಿಸಿ ಈ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡಿದ್ದಾರೆ. ಹಮಾಸ್ ಈ ಒಪ್ಪಂದವನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮಧ್ಯ ಪ್ರಾಚ್ಯದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಹಮಾಸ್ ಗಾಗಿ ಇದು ಅತ್ಯುತ್ತಮ ಅವಕಾಶ" ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
► ಹಮಾಸ್ ಗೆ ಇಸ್ರೇಲ್ ನಿಂದ ಗಂಭೀರ ಎಚ್ಚರಿಕೆ
ಈ ನಡುವೆ, ಹಮಾಸ್ ಒಪ್ಪಂದವನ್ನು ಅಂಗೀಕರಿಸದಿದ್ದರೆ ಗಾಝಾ ನಗರವನ್ನು ಸಂಪೂರ್ಣವಾಗಿ ನಾಶ ಮಾಡುವುದಾಗಿ ಇಸ್ರೇಲ್ ತೀವ್ರ ಎಚ್ಚರಿಕೆ ನೀಡಿದೆ.
"ರಫಾದಲ್ಲಿ ನಾವು ಮಾಡಿದ್ದನ್ನೇ ಗಾಝಾ ನಗರ ಮತ್ತು ಅಲ್ಲಿನ ಶಿಬಿರಗಳಲ್ಲೂ ಮಾಡುತ್ತೇವೆ. ಎಲ್ಲವೂ ಧೂಳಿಗೆ ಸಮನಾಗಲಿದೆ" ಎಂದು ಇಸ್ರೇಲ್ ನ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಮೆರಿಕ ಮೂಲದ Axios ವರದಿಯ ಪ್ರಕಾರ, ಕದನ ವಿರಾಮ ಮತ್ತು ಒತ್ತೆಯಾಳುಗಳ ವಿನಿಮಯ ಒಪ್ಪಂದದ ಕುರಿತ ಮಾತುಕತೆಗಳು ತಕ್ಷಣ ಮುಂದುವರಿಯದಿದ್ದಲ್ಲಿ, ಇಸ್ರೇಲ್ ತನ್ನ ಭೂ ಆಕ್ರಮಣವನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿದೆ.
ಇಸ್ರೇಲ್ ಈಗಾಗಲೇ ಗಾಝಾ ನಗರದ ವಿವಿಧ ಪ್ರದೇಶಗಳಲ್ಲಿ ಜನರಿಗೆ ದಕ್ಷಿಣ ಭಾಗಕ್ಕೆ ತಕ್ಷಣ ಸ್ಥಳಾಂತರಗೊಳ್ಳುವಂತೆ ಆದೇಶಿಸಿದ್ದು, ಭೂ ಆಕ್ರಮಣದ ಮುಂದಿನ ಹಂತಕ್ಕೆ ಸೈನಿಕ ಸಿದ್ಧತೆ ಗಂಭೀರವಾಗುತ್ತಿದೆ ಎನ್ನಲಾಗಿದೆ.
► ಅಮೆರಿಕದಲ್ಲಿ ರಾಜತಾಂತ್ರಿಕ ಚಟುವಟಿಕೆ
ಇಸ್ರೇಲ್‌ನ ಹಿರಿಯ ಅಧಿಕಾರಿ ರಾನ್ ಡೆರ್ಮರ್ ಸೋಮವಾರ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿಯಾಗಿ, ಕದನ ವಿರಾಮದ ಷರತ್ತುಗಳ ಬಗ್ಗೆ ಚರ್ಚೆ ನಡೆಸಿದರು.
ಟ್ರಂಪ್ ಅವರು, ಮುಂದಿನ ವಾರ ವಾಷಿಂಗ್ಟನ್ ಗೆ ಆಗಮಿಸಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲೆ ಈ ಒಪ್ಪಂದವನ್ನು ಅಂಗೀಕರಿಸುವಂತೆ ಒತ್ತಾಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
► ಇಸ್ರೇಲ್ ಮತ್ತು ಹಮಾಸ್ ನಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಾಕಿ
ಈ ಕುರಿತಂತೆ ಇಸ್ರೇಲ್ ಮತ್ತು ಹಮಾಸ್ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇಸ್ರೇಲ್ ಮತ್ತು ಹಮಾಸ್ ನಡುವೆ ಒತ್ತೆಯಾಳುಗಳ ಬಿಡುಗಡೆ ಮಾಡುವ ಮಾತುಕತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಟ್ರಂಪ್ ಅವರು, ಹಮಾಸ್ ಈ ಒಪ್ಪಂದವನ್ನು ಒಪ್ಪಿಕೊಳ್ಳುವುದು ಉತ್ತಮ ಎಂದು ತಿಳಿಸಿದ್ದಾರೆ. ಈ ಒಪ್ಪಂದವು ಹಮಾಸ್ ಗೆ ದೊರಕಬಹುದಾದ ಅತ್ಯುತ್ತಮ ಅವಕಾಶವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಶಾಶ್ವತ ಕದನ ವಿರಾಮ ಸಾಧಿಸಲು ಈ 60 ದಿನಗಳ ಕಾಲ ಅತಿ ಪ್ರಮುಖವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.