ನ್ಯಾಷನಲ್ ಗಾರ್ಡ್ ಸದಸ್ಯರ ಮೇಲೆ ಗುಂಡು ಹಾರಿಸಿದ ಪ್ರಕರಣ | ಸಡಿಲ ವಲಸೆ ನೀತಿಗಳು ‘ರಾಷ್ಟ್ರೀಯ ಭದ್ರತೆಗೆ ಅಪಾಯ’ : ಟ್ರಂಪ್ ಅಸಮಾಧಾನ
ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ನ್ಯಾಷನಲ್ ಗಾರ್ಡ್ ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸಿದ ಶಂಕಿತ ವ್ಯಕ್ತಿ ಅಫ್ಘಾನ್ ಪ್ರಜೆ ಎಂದು ಪತ್ತೆಯಾದ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ವಲಸೆ ನೀತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ವೇತಭವನದಿಂದ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಟ್ರಂಪ್, “ಅಮೆರಿಕ ಎದುರಿಸುತ್ತಿರುವ ಅತ್ಯಂತ ದೊಡ್ಡ ರಾಷ್ಟ್ರೀಯ ಭದ್ರತಾ ಬೆದರಿಕೆಗಳಿಗೆ ಸಡಿಲ ವಲಸೆ ನೀತಿಗಳೇ ಕಾರಣ. ರಾಷ್ಟ್ರೀಯ ಸುರಕ್ಷತೆಗೆ ಇಂತಹ ಅಪಾಯವನ್ನು ಯಾವುದೇ ಪ್ರಗತಿಶೀಲ ರಾಷ್ಟ್ರ ಸಹಿಸುವುದಿಲ್ಲ” ಎಂದು ಹೇಳಿದರು.
ಡಿಸಿಯಲ್ಲಿ ನಡೆದ ಗುಂಡಿನ ದಾಳಿಯನ್ನು ಅವರು ಘೋರ ಭಯೋತ್ಪಾದಕ ಕೃತ್ಯ ಎಂದು ವಿಶ್ಲೇಷಿಸಿದರು. ಘಟನೆ ಬಳಿಕ ಯುನೈಟೆಡ್ ಸ್ಟೇಟ್ಸ್ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಶನ್ ಸರ್ವಿಸಸ್ (USCIS) ಎಲ್ಲಾ ಅಫ್ಘಾನ್ ಪ್ರಜೆಗಳಿಗೆ ವಲಸೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಇದೇ ವೇಳೆ ಟ್ರಂಪ್ ಆಡಳಿತವು ಅಮೆರಿಕದ ವಲಸೆ ವ್ಯವಸ್ಥೆಯನ್ನು ಪುನರ್‌ರಚಿಸುವ ಪ್ರಯತ್ನದಲ್ಲಿದ್ದು, ವಲಸಿಗರ ಹಿನ್ನೆಲೆ ಪರಿಶೀಲನೆಗೆ ಹೆಚ್ಚುವರಿ ಕಠಿಣ ಮಾನದಂಡಗಳನ್ನು ಅನ್ವಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ.