ನಾಳೆ ಅ.13 ರಂದು ಈಜಿಪ್ಟ್ ನಲ್ಲಿ ಗಾಝಾ ಶಾಂತಿ ಶೃಂಗಸಭೆ
ಟ್ರಂಪ್, ಎಲ್-ಸಿಸಿ ನೇತೃತ್ವ; ಜಾಗತಿಕ ನಾಯಕರ ಉಪಸ್ಥಿತಿ
Photo Credit: Reuters
ಕೈರೋ, ಅ.12: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಎಲ್-ಸಿಸಿ ಜಂಟಿ ಅಧ್ಯಕ್ಷತೆಯಲ್ಲಿ ಈಜಿಪ್ಟ್ ನ ಶರ್ಮ್ ಎಲ್-ಶೇಖ್ ನಗರದಲ್ಲಿ ಸೋಮವಾರ (ಅಕ್ಟೋಬರ್ 13)ರಂದು ಗಾಝಾ ಶಾಂತಿ ಶೃಂಗಸಭೆ ನಡೆಯಲಿದೆ ಎಂದು ಈಜಿಪ್ಟ್ ಸರಕಾರದ ಮೂಲಗಳು ಹೇಳಿವೆ.
ಸೋಮವಾರ ಅಪರಾಹ್ನ ನಡೆಯಲಿರುವ ಶೃಂಗಸಭೆಯಲ್ಲಿ 20ಕ್ಕೂ ಅಧಿಕ ಜಾಗತಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಗಾಝಾ ಪಟ್ಟಿಯಲ್ಲಿ ಯುದ್ಧವನ್ನು ಕೊನೆಗೊಳಿಸುವುದು, ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸುವ ಪ್ರಯತ್ನಗಳನ್ನು ಹೆಚ್ಚಿಸುವುದು ಮತ್ತು ಪ್ರಾದೇಶಿಕ ಸುರಕ್ಷತೆ ಮತ್ತು ಸ್ಥಿರತೆಯ ಹೊಸ ಯುಗಕ್ಕೆ ಅವಕಾಶ ಮಾಡಿಕೊಡುವ ಉದ್ದೇಶವನ್ನು ಇದು ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.
ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಸ್ಪೇನ್ ಪ್ರಧಾನಿ ಪೆಡ್ರೋ ಸ್ಯಾಂಚೆಸ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್, ಜರ್ಮನಿಯ ಛಾನ್ಸಲರ್ ಫ್ರೆಡ್ರಿಕ್ ಮೆರ್ಝ್ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನೂ ಆಹ್ವಾನಿಸಲಾಗಿದ್ದು ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಕೀರ್ತಿವರ್ಧನ್ ಸಿಂಗ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪಾಲ್ಗೊಳ್ಳುತ್ತಾರೆಯೇ ಎಂಬ ಮಾಹಿತಿಯಿಲ್ಲ, ಆದರೆ ತಾನು ಪಾಲ್ಗೊಳ್ಳುವುದಿಲ್ಲ ಎಂದು ಹಮಾಸ್ ಸ್ಪಷ್ಟಪಡಿಸಿದೆ.
ಸೋಮವಾರದ ಒಳಗೆ ಒತ್ತೆಯಾಳುಗಳು ಮತ್ತು ಫೆಲೆಸ್ತೀನಿಯನ್ ಕೈದಿಗಳ ಬಿಡುಗಡೆಯೊಂದಿಗೆ ಶಾಂತಿ ಯೋಜನೆಯ ಪ್ರಥಮ ಹಂತ ಆರಂಭಗೊಳ್ಳಲಿದ್ದು ಇದು ಎರಡು ವರ್ಷಗಳ ಯುದ್ಧದ ಬಳಿಕ ಐತಿಹಾಸಿಕ ನಿರ್ಣಾಯಕ ಕ್ಷಣವಾಗಿದೆ ಎಂದು ಬ್ರಿಟನ್ ಬಣ್ಣಿಸಿದೆ.