ಮಾಸ್ಕೋ ವಲಯದಲ್ಲಿ ಇಂಧನ ಪೈಪ್ ಲೈನ್ ಮೇಲೆ ಉಕ್ರೇನ್ ದಾಳಿ: ವರದಿ
Photo Credit : AP \ PTI
ಕೀವ್, ನ.1: ರಶ್ಯದ ಸೇನೆಗೆ ಇಂಧನ ಪೂರೈಸುವ ಪ್ರಮುಖ ಇಂಧನ ಪೈಪ್ ಲೈನ್ ಮೇಲೆ ದಾಳಿ ನಡೆಸಿರುವುದಾಗಿ ಉಕ್ರೇನ್ ನ ಪಡೆಗಳು ಶನಿವಾರ ಹೇಳಿವೆ.
ರಯಝಾನ್, ನಿಝ್ನಿ, ನೊವ್ಗೊರೊಡ್ ಮತ್ತು ಮಾಸ್ಕೋ ನಗರಗಳ ರಿಫೈನರಿಗಳಿಂದ ಗ್ಯಾಸೊಲಿನ್, ಡೀಸೆಲ್ ಮತ್ತು ಜೆಟ್ ಇಂಧನಗಳನ್ನು ಸೇನೆಗೆ ಪೂರೈಸುವ 400 ಕಿ.ಮೀ ವ್ಯಾಪ್ತಿಯ ಕೊಲ್ಟ್‍ಸೆವಾಯ್ ಪೈಪ್ ಲೈನ್ ಮೇಲೆ ರಮೆಂಸ್ಕಿ ಜಿಲ್ಲಾ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ನಡೆದ ದಾಳಿಯಲ್ಲಿ ಪೈಪ್ ಲೈನ್ ಗೆ ವ್ಯಾಪಕ ಹಾನಿಯಾಗಿದೆ. ಈ ಪೈಪ್ ಲೈನ್ ವಾರ್ಷಿಕ ಸುಮಾರು 3 ದಶಲಕ್ಷ ಟನ್ ಗಳಷ್ಟು ಜೆಟ್ ಇಂಧನ, 2.8 ದಶಲಕ್ಷ ಟನ್ ಗಳಷ್ಟು ಡೀಸೆಲ್ ಮತ್ತು 1.6 ದಶಲಕ್ಷ ಟನ್ ಗಳಷ್ಟು ಗ್ಯಾಸೊಲಿನ್ ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಉಕ್ರೇನ್ ನ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಉಕ್ರೇನ್ ನ ಪೂರ್ವ ಮುಂಚೂಣಿ ಕ್ಷೇತ್ರದ ಪ್ರಮುಖ ನಗರ ಪೊಕ್ರೋವ್ಸ್ಕ್ ನ ರಕ್ಷಣೆಗೆ ಧಾವಿಸಿದ್ದ ಉಕ್ರೇನ್ ನ ವಿಶೇಷ ಕಾರ್ಯಪಡೆಯ ತುಕಡಿಯನ್ನು ತನ್ನ ಸೇನೆ ಸೋಲಿಸಿದ್ದು ನಗರದೊಳಗೆ ಪ್ರವೇಶಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ. ಶುಕ್ರವಾರ ತಡರಾತ್ರಿ ದಕ್ಷಿಣ ಉಕ್ರೇನ್ ಮೇಲೆ ರಶ್ಯ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದು ಮಗು ಸೇರಿದಂತೆ ಇತರ 15 ಮಂದಿ ಗಾಯಗೊಂಡಿದ್ದಾರೆ. ಶನಿವಾರ ಬೆಳಿಗ್ಗೆ ರಶ್ಯವು ಮಧ್ಯ ಪೊಲ್ಟಾವಾ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ ಗ್ಯಾಸ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಕ್ರೇನ್ ನ ತುರ್ತು ಕಾರ್ಯಪಡೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.