×
Ad

ರಶ್ಯ ಪರ ಹೋರಾಡುತ್ತಿದ್ದ ಭಾರತೀಯ ವ್ಯಕ್ತಿಯನ್ನು ಸೆರೆ ಹಿಡಿಯಲಾಗಿದೆ: ಉಕ್ರೇನ್

Update: 2025-10-08 11:56 IST

Screengrab:X/@AdityaRajKaul

ಕೀವ್: ರಶ್ಯ ಸೇನೆಯ ಪರವಾಗಿ ಹೋರಾಡುತ್ತಿದ್ದ 22 ವರ್ಷದ ಭಾರತೀಯ ಪ್ರಜೆಯನ್ನು ಸೆರೆ ಹಿಡಿಯಲಾಗಿದೆ ಎಂದು ಉಕ್ರೇನ್ ಸೇನಾಪಡೆಗಳು ಹೇಳಿವೆ. ಆದರೆ, ಈ ಸುದ್ದಿಯನ್ನು ಇನ್ನೂ ದೃಢಪಡಿಸದ ಭಾರತೀಯ ಪ್ರಾಧಿಕಾರಗಳು, ಗುಜರಾತ್‌ನ ಮೊರ್ಬಿ ನಿವಾಸಿಯೆನ್ನಲಾದ ಸಾಹಿಲ್ ಮುಹಮ್ಮದ್ ಹುಸೈನ್ ಎಂಬ ಭಾರತೀಯ ಪ್ರಜೆಯನ್ನು ಉಕ್ರೇನ್ ಸೇನಾಪಡೆಗಳು ಸೆರೆ ಹಿಡಿದಿವೆ ಎಂಬ ಉಕ್ರೇನ್ ಮಾಧ್ಯಮ ವರದಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿವೆ.

"ವರದಿಯ ನೈಜತೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ಈ ಸಂಬಂಧ ನಾವು ಉಕ್ರೇನ್ ಕಡೆಯಿಂದ ಯಾವುದೇ ಅಧಿಕೃತ ಸಂದೇಶ ಸ್ವೀಕರಿಸಿಲ್ಲ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.

ʼಕೀವ್ ಇಂಡಿಪೆಂಡೆಂಟ್‌ʼ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ರಶ್ಯದ ವಿಶ್ವವಿದ್ಯಾಲಯವೊಂದರಲ್ಲಿ ವ್ಯಾಸಂಗ ಮಾಡಲು ತೆರಳಿದ್ದ ಹುಸೈನ್, ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧಕ್ಕೆ ರಶ್ಯ ಸೇನೆಯಲ್ಲಿ ತನ್ನನ್ನು ನೋಂದಾಯಿಸಿಕೊಂಡಿದ್ದಾನೆ ಎನ್ನಲಾಗಿದೆ.

ಹುಸೈನ್‌ನನ್ನು ಸೆರೆ ಹಿಡಿದಿರುವ ಉಕ್ರೇನ್‌ನ 63ನೇ ಮೆಕಾನೈಸ್ಡ್ ಬ್ರಿಗೇಡ್ ಚಿತ್ರೀಕರಿಸಿಕೊಂಡಿರುವ ವಿಡಿಯೊದಲ್ಲಿ ಆತ ಕಾಣಿಸಿಕೊಂಡಿದ್ದಾನೆ. ಆ ವಿಡಿಯೊದಲ್ಲಿ, "ಮಾದಕ ದ್ರವ್ಯ ಸಂಬಂಧಿತ ಆರೋಪದಲ್ಲಿ ನನಗೆ ರಶ್ಯದಲ್ಲಿ ಏಳು ವರ್ಷಗಳ ಸೆರೆವಾಸ ವಿಧಿಸಲಾಗಿತ್ತು" ಎಂದು ಆತ ಹೇಳಿಕೊಂಡಿದ್ದಾನೆ.

ನಾನು ಜೈಲಿನಲ್ಲಿದ್ದಾಗ, ಮತ್ತಷ್ಟು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ರಶ್ಯ ಸೇನೆಯೊಂದಿಗಿನ ಗುತ್ತಿಗೆಗೆ ಸಹಿ ಹಾಕಬೇಕು ಎಂಬ ಆಹ್ವಾನವನ್ನು ನನಗೆ ನೀಡಲಾಯಿತು. ನಾನು ಈ ಆಹ್ವಾನವನ್ನು ಒಪ್ಪಿಕೊಂಡೆ" ಎಂದೂ ಆತ ಆ ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ.

"ನನಗೆ ಜೈಲಿನಲ್ಲಿ ಉಳಿಯಲು ಇಷ್ಟವಿರಲಿಲ್ಲ. ಹೀಗಾಗಿ, ವಿಶೇಷ ಸೇನಾ ಕಾರ್ಯಾಚರಣೆ ಗುತ್ತಿಗೆಗೆ ನಾನು ಸಹಿ ಮಾಡಿದೆ. ಆದರೆ, ನಾನು ಅಲ್ಲಿಂದ ಹೊರಬರಲು ಬಯಸಿದ್ದೆ" ಎಂದು ಆತ ಹೇಳಿದ್ದಾನೆ.

ಇದಕ್ಕೂ ಮುನ್ನ, ರಶ್ಯದಲ್ಲಿ ನೆಲೆಸಲು ತೆರಳಿದ್ದ 126 ಭಾರತೀಯ ಪ್ರಜೆಗಳ ಪೈಕಿ, 12 ಮಂದಿ ಭಾರತೀಯ ಪ್ರಜೆಗಳು ಉಕ್ರೇನ್‌ನಲ್ಲಿ ರಶ್ಯ ಸೇನೆಯ ಪರವಾಗಿ ಹೋರಾಡುವಾಗ ಮೃತಪಟ್ಟಿದ್ದಾರೆ ಎಂದು ಜನವರಿ ತಿಂಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ಇದೇ ವೇಳೆ 16 ಮಂದಿ ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದೂ ಹೇಳಿತ್ತು.

ಬಳಿಕ, ಈ ವಿಷಯವನ್ನು ರಶ್ಯ ಎದುರು ಬಲವಾಗಿ ಮಂಡಿಸಿದ್ದ ಭಾರತ, ರಶ್ಯ-ಉಕ್ರೇನ್ ಯುದ್ಧದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮುಂಚಿತವಾಗಿ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News