ಇಸ್ರೇಲ್ ವಸಾಹತುಗಳ ಜೊತೆ ನಂಟು ಹೊಂದಿರುವ 70 ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ವಿಶ್ವಸಂಸ್ಥೆ
ಸಾಂದರ್ಭಿಕ ಚಿತ್ರ
ಜಿನೇವಾ,ಸೆ.27: ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಇಸ್ರೇಲ್ ವಸಾಹತುಗಳಲ್ಲಿ ಔದ್ಯಮಿಕ ನಂಟುಗಳನ್ನು ಹೊಂದುವ ಮೂಲಕ ಫೆಲೆಸ್ತೀನಿಯರ ಮಾನವಹಕ್ಕುಗಳ ಉಲ್ಲಂಘನೆಯಲ್ಲಿ ಶಾಮೀಲಾಗಿವೆಯೆಂದು ಆರೋಪಿಸಿ, ಹನ್ನೊಂದು ದೇಶಗಳ 70 ಕಂಪೆನಿಗಳನ್ನು ವಿಶ್ವಸಂಸ್ಥೆಯು ಶುಕ್ರವಾರ ಕಪ್ಪುಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸಿದೆ.
ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮಾರಾಟಗಾರರು ಹಾಗೂ ಆರ್ಥ್ ಮೂವರ್‌ನಂತಹ ಯಂತ್ರಗಳ ತಯಾರಕ ಸಂಸ್ಥೆಗಳು ಅಲ್ಲದೆ ಭದ್ರತೆ, ಪ್ರಯಾಣ ಹಾಗೂ ಆರ್ಥಿಕ ಸೇವೆಗಳನ್ನು ಒದಗಿಸುವ ಕಂಪೆನಿಗಳು ಇವುಗಳಲ್ಲಿ ಸೇರಿವೆ.
ಈವರೆಗೆ ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಸೇರ್ಪಡೆಗೊಂಡ 158 ಕಂಪೆನಿಗಳ ಪೈಕಿ ಹೆಚ್ಚಿನವು ಇಸ್ರೇಲ್‌ನದ್ದಾಗಿವೆ. ಉಳಿದ ಕಂಪೆನಿಗಳು ಅಮೆರಿಕ, ಕೆನಡ, ಚೀನಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ಸ್ಪೇನ್, ಪೋರ್ಚುಗಲ್ ಹಾಗೂ ನೆದರ್‌ಲ್ಯಾಂಡ್ಸ್ ಮತ್ತು ಲಕ್ಸೆಂಬರ್ಗ್ ದೇಶಕ್ಕೆ ಸೇರಿದವು.
ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಸೇರಿದ ಕಂಪೆನಿಗಳ ಪಟ್ಟಿಯ ಪ್ರಕಟಣೆಯನ್ನು ಸ್ಪಷ್ಟವಾಗಿ ನಿರಾಕರಿಸುವುದಾಗಿ ಇಸ್ರೇಲ್ ತಿಳಿಸಿದೆ. ಇಸ್ರೇಲ್ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸುವ ಕೊಳಕು ಯತ್ನಕ್ಕೆ ಮಣಿಯದಂತೆ ಸ್ನೇಹಿತರಿಗೆ ಕರೆ ನೀಡುತ್ತೇವೆ ಎಂದು ಹೇಳಿದೆ.
...................................
ಭಾರತ-ಪಾಕ್ ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ : ಟ್ರಂಪ್ ಹೇಳಿಕೆಯನ್ನು ಸಮರ್ಥಿಸಿದ ಪಾಕ್ ಪ್ರಧಾನಿ ಶಹಬಾಝ್ ಶರೀಫ್
ವಿಶ್ವಸಂಸ್ಥೆ,ಸೆ.27: ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಏರ್ಪಡಿಸಲು ತಾನು ಮಧ್ಯಸ್ಥಿಕೆ ವಹಿಸಿದ್ದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಧ್ವನಿಗೂಡಿಸಿದ್ದಾರೆ. ಭಾರತ-ಪಾಕ್ ನಡುವೆ ಕದನವಿರಾಮ ಏರ್ಪಡಿಸಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಅವರು ಹೇಳಿದ್ದಾರೆ.
‘ಶಾಂತಿಗಾಗಿ ಅಧ್ಯಕ್ಷ ಡೊನಾಲ್ಡ್ ನಡೆಸಿದ ಪ್ರಯತ್ನಗಳು ದಕ್ಷಿಣ ಏಶ್ಯದಲ್ಲಿ ಅತ್ಯಂತ ಭೀಕರ ಸಮರ ನಡೆಯುವುದನ್ನು ತಪ್ಪಿಸಿದೆ’’ ಎಂದವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ಒಂದು ವೇಳೆ ಟ್ರಂಪ್ ಅವರು ಮಧ್ಯಪ್ರವೇಶಿಸದೆ ಇದ್ದಲ್ಲಿ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆಯಿತ್ತು ಹಾಗೂ ಅದರ ಪರಿಣಾಮವು ಅತ್ಯಂತ ವಿನಾಶಕಾರಿಯಾಗುತ್ತಿತ್ತು ಎಂದವರು ಹೇಳಿದರು.