×
Ad

ಗಾಝಾದಲ್ಲಿ ನಾಗರಿಕರ ಹತ್ಯೆ ಅಮಾನವೀಯ ಕೃತ್ಯ: ವಿಶ್ವಸಂಸ್ಥೆ ಖಂಡನೆ

Update: 2025-07-22 22:29 IST

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ (PC | REUTERS)

ನ್ಯೂಯಾರ್ಕ್: ಗಾಝಾದಲ್ಲಿ ಮಾನವೀಯ ನೆರವು ಕೋರಿದ್ದ ನಾಗರಿಕರನ್ನು ಇಸ್ರೇಲ್ ಹತ್ಯೆ ಮಾಡಿರುವುದನ್ನು ಖಂಡಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ `ಇದು ದೌರ್ಜನ್ಯ ಮತ್ತು ಅಮಾನವೀಯ ಕೃತ್ಯವಾಗಿದ್ದು ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.

ನ್ಯೂಯಾರ್ಕ್‍ನಲ್ಲಿ ಆಯೋಜಿಸಲಾಗಿರುವ ಉನ್ನತ ಮಟ್ಟದ ರಾಜಕೀಯ ಶೃಂಗಸಭೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಗುಟೆರಸ್ ʼಗಾಝಾದಲ್ಲಿನ ಜನತೆ ಆಹಾರದ ತೀವ್ರ ಕೊರತೆ ಎದುರಿಸುತ್ತಿದ್ದಾರೆ. ತಮ್ಮ ಕುಟುಂಬದವರಿಗೆ ವಿಶ್ವಸಂಸ್ಥೆಯ ನೆರವನ್ನು ಅಲ್ಲಿನ ಜನತೆ ಬಯಸುತ್ತಿದ್ದಾರೆ ' ಎಂದರು. ಗಾಝಾದಲ್ಲಿ ತಕ್ಷಣ ಕದನ ವಿರಾಮದ ಅಗತ್ಯವಿದೆ. ಎಲ್ಲಾ ಒತ್ತೆಯಾಳುಗಳನ್ನೂ ಹಮಾಸ್ ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ಎರಡು ರಾಷ್ಟ್ರಗಳ ಪರಿಹಾರವನ್ನು ಸಾಧಿಸಲು ಪ್ರಥಮ ಹೆಜ್ಜೆಯಾಗಿ ಗಾಝಾ ಪ್ರದೇಶಕ್ಕೆ ಮಾನವೀಯ ನೆರವು ಅಡೆತಡೆಯಿಲ್ಲದೆ ಪೂರೈಕೆಯಾಗಬೇಕು ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ಆಗ್ರಹಿಸಿದರು.

ಯುದ್ಧ, ಸಂಘರ್ಷಗಳು ಉಲ್ಬಣಿಸಿದರೆ ಅಭಿವೃದ್ಧಿಯ ಗುರಿ ವಿಫಲವಾಗುತ್ತದೆ. ಸುಸ್ಥಿರ ಶಾಂತಿಗೆ ಸುಸ್ಥಿರ ಅಭಿವೃದ್ಧಿಯ ಅಗತ್ಯವಿದೆ. ಶಾಂತಿಯ ನಿರಂತರ ಸವೆತ ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಈ ಅಭಿವೃದ್ಧಿಗೆ ಅತೀ ದೊಡ್ಡ ಬೆದರಿಕೆಗಳಾಗಿವೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಶಾಶ್ವತವಾಗಿ ಮುಂದುವರಿಯಬೇಕು ಮತ್ತು ಉಕ್ರೇನ್‍ನಲ್ಲಿ ಶಾಶ್ವತ ಶಾಂತಿ ಸ್ಥಾಪನೆಯಾಗಬೇಕು. ಸುಡಾನ್‍ನಲ್ಲಿನ ಸಂಘರ್ಷ, ಕಾಂಗೋ ಗಣರಾಜ್ಯ, ಸೊಮಾಲಿಯಾ , ಸಹೇಲ್, ಮ್ಯಾನ್ಮಾರ್‍ನಲ್ಲಿನ ಹಿಂಸಾಚಾರ ಕೊನೆಗೊಳ್ಳಬೇಕು ಎಂದು ಕರೆ ನೀಡಿದ ಗುಟೆರಸ್, ಯುದ್ಧ ಮತ್ತು ಅಸ್ಥಿರತೆಯು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಮತ್ತಷ್ಟು ಕಠಿಣಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

"ಸ್ಥಳಾಂತರದ ಆದೇಶವು ಇನ್ನಷ್ಟು ನಾಗರಿಕರ ಹತ್ಯೆಗೆ ಕಾರಣವಾಗುತ್ತದೆ":

ಗಾಝಾದ ಡೀರ್ ಅಲ್-ಬಲಾಹ್‍ನಲ್ಲಿ ಸ್ಥಳಾಂತರಗೊಳ್ಳುವಂತೆ ಇಸ್ರೇಲ್‍ನ ಆದೇಶ ಹಾಗೂ ತೀವ್ರ ದಾಳಿಗಳು ಮತ್ತಷ್ಟು ನಾಗರಿಕರ ಸಾವು-ನೋವಿಗೆ ಕಾರಣವಾಗುತ್ತದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥರು ಮಂಗಳವಾರ ಹೇಳಿದ್ದಾರೆ.

ಗಾಝಾ ಪ್ರದೇಶದಲ್ಲಿ ನಾಗರಿಕರ ಸಾಂದ್ರತೆ ಮತ್ತು ಇಸ್ರೇಲ್ ಇದುವರೆಗೆ ಬಳಸಿದ ಯುದ್ಧದ ವಿಧಾನಗಳು ಮತ್ತು ಸಾಧನಗಳನ್ನು ಗಮನಿಸಿದರೆ, ಕಾನೂನುಬಾಹಿರ ಹತ್ಯೆಗಳ ಅಪಾಯ ಹಾಗೂ ಇತರ ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆಯ ಅಪಾಯ ಅತೀ ತೀವ್ರವಾಗಿದೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News