×
Ad

ಗಾಝಾದಲ್ಲಿ ಸುರಕ್ಷಿತ ವಲಯ ರಚನೆ ಸಾಧ್ಯವಿಲ್ಲ: ವಿಶ್ವಸಂಸ್ಥೆ ಎಚ್ಚರಿಕೆ

Update: 2023-12-05 22:36 IST

Photo: PTI

ಜಿನೆವಾ: ಇಸ್ರೇಲ್‌ನ ಬಾಂಬ್‌ದಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಗಾಝಾ ಪಟ್ಟಿಯೊಳಗೆ ನಾಗರಿಕರು ಸ್ಥಳಾಂತರಗೊಳ್ಳಲು ‘ಸುರಕ್ಷಿತ ವಲಯ’ ರಚನೆ ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆ ಮಂಗಳವಾರ ಎಚ್ಚರಿಕೆ ನೀಡಿದೆ.

ಹಮಾಸ್ ವಿರುದ್ಧದ ತನ್ನ ಕಾರ್ಯಾಚರಣೆ ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ಗಾಝಾದ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಸುರಕ್ಷಿತ ವಲಯ ರಚಿಸುವುದಾಗಿ ಇಸ್ರೇಲ್ ಸೋಮವಾರ ಹೇಳಿಕೆ ನೀಡಿತ್ತು. ಆರಂಭದಲ್ಲಿ ಉತ್ತರ ಗಾಝಾಪಟ್ಟಿಯ ಮೇಲೆ ಕಾರ್ಯಾಚರಣೆಯನ್ನು ಕೇಂದ್ರೀಕರಿಸಿದ್ದ ಇಸ್ರೇಲ್ ಸೇನೆ ಈಗ ದಕ್ಷಿಣ ಗಾಝಾ ಪ್ರದೇಶದಲ್ಲೂ ವಿಮಾನದ ಮೂಲಕ ಕರಪತ್ರಗಳನ್ನು ಉದುರಿಸಿ, ಬೇರೆ ಪ್ರದೇಶದತ್ತ ಸ್ಥಳಾಂತರಗೊಳ್ಳಲು ಸೂಚನೆ ನೀಡುತ್ತಿದೆ.

‘ತಥಾಕಥಿತ ಸುರಕ್ಷಿತ ವಲಯ ವೈಜ್ಞಾನಿಕವಲ್ಲ, ತರ್ಕಬದ್ಧವಲ್ಲ. ಅವು ಸಾಧ್ಯವಿಲ್ಲ ಮತ್ತು ಇದನ್ನು ಅಧಿಕಾರಿಗಳು ತಿಳಿದುಕೊಂಡಿದ್ದಾರೆಂದು ಭಾವಿಸುತ್ತೇನೆ’ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಯುನಿಸೆಫ್ ವಕ್ತಾರ ಜೇಮ್ಸ್ ಎಲ್ಡರ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಗಾಝಾದ ಪ್ರದೇಶದಲ್ಲಿ ಇಸ್ರೇಲ್ ವ್ಯಾಪಕ ದಾಳಿ ನಡೆಸುತ್ತಿರುವಂತೆಯೇ ಜನನಿಬಿಡ ಪ್ರದೇಶದಲ್ಲಿರುವ ನಾಗರಿಕರು ದಿಕ್ಕುದೆಸೆಯಿಲ್ಲದೆ ಪಲಾಯನ ಮಾಡುತ್ತಿದ್ದಾರೆ ಎಂದು ಅಂತರಾಷ್ಟ್ರೀಯ ನೆರವು ಸಂಘಟನೆಗಳು ಹೇಳಿವೆ. ‘ಇಸ್ರೇಲ್ ಘೋಷಿಸಿರುವ ಸುರಕ್ಷಿತ ವಲಯವು ಮಾನವೀಯ ನೆರವಿಗೆ ಸುರಕ್ಷಿತವಾಗಿರದು. ಯಾಕೆಂದರೆ ಇದು ಏಕಪಕ್ಷೀಯ ಘೋಷಣೆಯಾಗಿದೆ. ನಾಗರಿಕರಿಗೆ ಪಲಾಯನ ಮಾಡಲೂ ಸುರಕ್ಷಿತ ವ್ಯವಸ್ಥೆ ಇಲ್ಲದಿರುವುದು ಅಮಾನವೀಯ ವಿಷಯವಾಗಿದೆ. ಸರಿಯಾದ ಸುರಕ್ಷಿತ ವಲಯದಲ್ಲಿ ನೀವು ಆಹಾರ, ನೀರು, ಔಷಧ ಮತ್ತು ಆಶ್ರಯದ ಸ್ಥಿತಿಯನ್ನು ಖಾತರಿಪಡಿಸಬಹುದು. ಆದರೆ ಗಾಝಾದಲ್ಲಿ ಈಗ ಈ ಸ್ಥಿತಿಯಿಲ್ಲ. ನೀವು ಇದನ್ನು ಅತಿಯಾಗಿ ಹೇಳಲು ಸಾಧ್ಯವಿಲ್ಲ. ತಥಾಕಥಿತ ಸುರಕ್ಷಿತ ವಲಯ ಎಂಬುದು ಬಂಜರು ಭೂಮಿಯ ಸಣ್ಣ ತೇಪೆಗಳು ಅಥವಾ ಕಾಲುದಾರಿಗಳು. ಅಲ್ಲಿ ನೀರು, ಆಹಾರದ ವ್ಯವಸ್ಥೆಯಿಲ್ಲ, ಚಳಿ ಮತ್ತು ಮಳೆಯಿಂದ ರಕ್ಷಣೆಯಿಲ್ಲ, ನೈರ್ಮಲ್ಯದ ವ್ಯವಸ್ಥೆಯಿಲ್ಲ. ಗಾಝಾದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಶಿಬಿರಗಳಲ್ಲಿ ಮಿತಿಗಿಂತ ಹೆಚ್ಚಿನ ನಿರಾಶ್ರಿತರಿದ್ದಾರೆ, ಸುಮಾರು 400 ಜನರಿಗೆ ಒಂದು ಶೌಚಾಲಯವಿದೆ.

ಈಗ ತಾತ್ಕಾಲಿಕ ಶಿಬಿರಗಳಿಂದ ಈ ಜನರನ್ನು ತೆರವುಗೊಳಿಸಿ ಅವರನ್ನು ತಥಾಕಥಿತ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಶೌಚಾಲಯ, ಶುದ್ಧ ನೀರು, ಆಹಾರದ ವ್ಯವಸ್ಥೆಯಿಲ್ಲದ ಸ್ಥಳಕ್ಕೆ ಸಾವಿರಾರು ನಾಗರಿಕರನ್ನು ನೆಲೆಗೊಳಿಸುವ ಯೋಜನೆಯಿದೆ. ನೀರು, ನೈರ್ಮಲ್ಯ, ಆಶ್ರಯದ ವ್ಯವಸ್ಥೆಯಿಲ್ಲದೆ ತಥಾಕಥಿತ ಸುರಕ್ಷಿತ ವಲಯಗಳು ರೋಗಗಳ ವಲಯವಾಗುತ್ತಿದೆ’ ಎಂದು ಎಲ್ಡರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News