ಹವಾಮಾನ ಬದಲಾವಣೆಯಿಂದ ಮಕ್ಕಳ ಶಾಲಾ ಶಿಕ್ಷಣದ ಮೇಲೆ ಪರಿಣಾಮ: ವಿಶ್ವಸಂಸ್ಥೆ ವರದಿ
ವಿಶ್ವಸಂಸ್ಥೆ, ಜು.20: ತೀವ್ರ ಉಷ್ಣತೆಗೆ ಒಡ್ಡಿಕೊಳ್ಳುವ ಮಕ್ಕಳು ಹವಾಮಾನ ಬದಲಾವಣೆಯಿಂದಾಗಿ ತಮ್ಮ ಶಾಲಾ ಶಿಕ್ಷಣದ 1.5 ವರ್ಷಗಳನ್ನು ಕಳೆದುಕೊಳ್ಳಬಹುದು. ಇದರಿಂದಾಗಿ ದಶಕಗಳ ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿ ವ್ಯರ್ಥವಾಗುವ ಅಪಾಯವಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
ಹವಾಮಾನಕ್ಕೆ ಸಂಬಂಧಿಸಿದ ಒತ್ತಡಗಳಾದ ಉಷ್ಣತೆ, ಕಾಡ್ಗಿಚ್ಚು, ಚಂಡಮಾರುತಗಳು, ಪ್ರವಾಹ, ಬರಗಾಲ, ಕಾಯಿಲೆಗಳು, ಸಮುದ್ರದ ಮಟ್ಟ ಹೆಚ್ಚುವುದು, ಇತ್ಯಾದಿಗಳು ಶೈಕ್ಷಣಿಕ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ. ಬಹುತೇಕ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ಪ್ರತೀ ವರ್ಷ ಹವಾಮಾನ ಸಂಬಂಧಿತ ಸಮಸ್ಯೆಯಿಂದಾಗಿ ಶಾಲಾ ಮುಚ್ಚುವಿಕೆಯನ್ನು ಅನುಭವಿಸುತ್ತಿವೆ ಮತ್ತು ಇದರಿಂದ ಕಲಿಕೆಯ ನಷ್ಟ ಮತ್ತು ಶಾಲೆಯಿಂದ ಹೊರಗುಳಿಯುವಿಕೆಯ ಸಾಧ್ಯತೆಗಳು ಹೆಚ್ಚುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಾಖಕ್ಕೆ ಒಡ್ಡಿಕೊಳ್ಳುವುದು ಮಕ್ಕಳ ಶೈಕ್ಷಣಿಕ ಫಲಿತಾಂಶಗಳ ಮೇಲೆ ಗಮನಾರ್ಹ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. 2019ರಲ್ಲಿ ತೀವ್ರ ಹವಾಮಾನ ಘಟನೆಗಳಿಂದ ಹೆಚ್ಚು ಪರಿಣಾಮಕ್ಕೆ ಒಳಗಾದ 10 ದೇಶಗಳಲ್ಲಿ 8 ಕಡಿಮೆ ಅಥವಾ ಮಧ್ಯಮ ಆದಾಯದ ದೇಶಗಳಾಗಿವೆ. ಮಕ್ಕಳಿಗೆ ಅತೀ ಹೆಚ್ಚು ಹವಾಮಾನ ಅಪಾಯಗಳನ್ನು ಹೊಂದಿರುವ 33 ದೇಶಗಳಲ್ಲಿ 29 ದುರ್ಬಲ ದೇಶಗಳೆಂದು ಪರಿಗಣಿಸಲಾಗಿದೆ.
1969 ಮತ್ತು 2012ರ ನಡುವೆ 29 ದೇಶಗಳಲ್ಲಿ ಜನಗಣತಿ ಮತ್ತು ಹವಾಮಾನ ದತ್ತಾಂಶಗಳಿಗೆ ಸಂಬಂಧಿಸಿದ ವಿಶ್ಲೇಷಣೆಯ ಪ್ರಕಾರ `ಪ್ರಸವಪೂರ್ವ ಮತ್ತು ಆರಂಭಿಕ ಜೀವಿತಾವಧಿಯಲ್ಲಿ ಸರಾಸರಿ ತಾಪಮಾನಕ್ಕಿಂತ ಹೆಚ್ಚಿನ ಶಾಖಕ್ಕೆ ಒಡ್ಡಿಕೊಳ್ಳುವುದು(ವಿಶೇಷವಾಗಿ ಆಗ್ನೇಯ ಏಶ್ಯಾದಲ್ಲಿ) ಶಾಲಾ ಶಿಕ್ಷಣದ ಅವಧಿಯನ್ನು ಕಡಿಮೆಗೊಳಿಸುತ್ತದೆ' ಎಂದು ವರದಿ ಹೇಳಿದೆ.