×
Ad

ಜುಲೈ ತಿಂಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿದ ಪಾಕಿಸ್ತಾನ

Update: 2025-07-01 21:38 IST

PC : PTI

ವಿಶ್ವಸಂಸ್ಥೆ: ಜುಲೈ ತಿಂಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಪಾಕಿಸ್ತಾನ ಮಂಗಳವಾರ ವಹಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದು 2013ರ ಬಳಿಕ ಪಾಕಿಸ್ತಾನದ ಪ್ರಥಮ ಅಧ್ಯಕ್ಷತೆಯಾಗಿದೆ. ಈ ತಿಂಗಳಲ್ಲಿ ಎರಡು ಉನ್ನತ ಮಟ್ಟದ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಜುಲೈ 22ರಂದು ` ಬಹುಪಕ್ಷೀಯತೆ ಮತ್ತು ವಿವಾದಗಳ ಶಾಂತಿಯುತ ಇತ್ಯರ್ಥದ ಮೂಲಕ ಅಂತರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯನ್ನು ಉತ್ತೇಜಿಸುವುದು' ಎಂಬ ವಿಷಯದಲ್ಲಿ ಮುಕ್ತ ಚರ್ಚೆ, ಜುಲೈ 24ರಂದು `ವಿಶ್ವಸಂಸ್ಥೆ ಮತ್ತು ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ಸಂಸ್ಥೆಗಳ ನಡುವಿನ ಸಹಕಾರ' ಕುರಿತು ಸಭೆ ನಡೆಯಲಿದ್ದು ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಈ ಮಧ್ಯೆ, ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಪಾಕಿಸ್ತಾನ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ ` ಒಪ್ಪಂದವು ಇನ್ನೂ ಮಾನ್ಯವಾಗಿದೆ ಮತ್ತು ಕ್ರಿಯಾತ್ಮಕವಾಗಿದೆ' ಎಂದು ತೀರ್ಪು ನೀಡಿತ್ತು. ಆದರೆ ತೀರ್ಪನ್ನು ಬಲವಾಗಿ ತಿರಸ್ಕರಿಸುವುದಾಗಿ ಭಾರತ ಹೇಳಿತ್ತು.

ನ್ಯಾಯಾಲಯ ನೀಡಿರುವ ತೀರ್ಪು ಪಾಕಿಸ್ತಾನದ ನಿಲುವನ್ನು ಸಮರ್ಥಿಸಿದೆ. ಆದ್ದರಿಂದ ಭಾರತ ತಕ್ಷಣ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದಡಿಯ ತನ್ನ ಬಾಧ್ಯತೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಇಶಾಕ್ ದಾರ್ ಸೋಮವಾರ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News