ವಿಶ್ವಸಂಸ್ಥೆಯಲ್ಲಿ ಒಗ್ಗೂಡಿದ ಅಮೆರಿಕ, ರಶ್ಯ | ಉಕ್ರೇನ್ ದಾಳಿಯನ್ನು ಖಂಡಿಸುವ ನಿರ್ಣಯಕ್ಕೆ ಅಮೆರಿಕ ವಿರೋಧ
ಸಾಂದರ್ಭಿಕ ಚಿತ್ರ | PC : PTI
ವಿಶ್ವಸಂಸ್ಥೆ: ಉಕ್ರೇನ್‍ಗೆ ಸಂಬಂಧಿಸಿದ ಈ ಹಿಂದಿನ ಅಮೆರಿಕದ ನೀತಿಯಿಂದ ಗಮನಾರ್ಹ ಬದಲಾವಣೆಯನ್ನು ಸೂಚಿಸುವ ಕ್ರಮವಾಗಿ ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಖಂಡಿಸುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯದಿಂದ ಅಮೆರಿಕ ದೂರ ಸರಿದಿದೆ.
ಈ ನಡೆಯು ರಶ್ಯದ ಪರವಾದ ಷರತ್ತುಗಳೊಂದಿಗೆ ಯುದ್ಧವನ್ನು ಅಂತ್ಯಗೊಳಿಸುವ ಅಮೆರಿಕದ ನಿಲುವನ್ನು ಮತ್ತು ಮಿತ್ರರಾಷ್ಟ್ರಗಳೊಂದಿಗೆ ಅಮೆರಿಕದ ಒಡಕನ್ನು ಸೂಚಿಸುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ನ ಪ್ರಾದೇಶಿಕ ಸಮಗ್ರತೆಯನ್ನು ಬೆಂಬಲಿಸುವ ವಿಶ್ವಸಂಸ್ಥೆಯ ನಿರ್ಣಯದ ವಿರುದ್ಧ ರಶ್ಯ, ಅಮೆರಿಕ, ಬೆಲಾರಸ್, ಉತ್ತರ ಕೊರಿಯಾ, ಸುಡಾನ್ ಸಹಿತ 18 ದೇಶಗಳು ಮತ ಹಾಕಿದ್ದರೆ 93 ರಾಷ್ಟ್ರಗಳು ಬೆಂಬಲಿಸಿವೆ. ಭಾರತ, ಚೀನಾ ಸೇರಿದಂತೆ 65 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು.
` ಉಕ್ರೇನ್ ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಮುನ್ನಡೆಸುವುದು' ಎಂಬ ಶೀರ್ಷಿಕೆಯ ನಿರ್ಣಯವನ್ನು ಉಕ್ರೇನ್ ಮತ್ತು ಯುರೋಪಿಯನ್ ದೇಶಗಳು ರಚಿಸಿದ್ದು ` ಉಕ್ರೇನ್ ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ' ವಿಶ್ವಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದೆ. ಈ ಹಿಂದಿನ ನಿರ್ಣಯಗಳಿಗೆ ಹೋಲಿಸಿದರೆ ನಿರ್ಣಯವನ್ನು ಬೆಂಬಲಿಸುವ ದೇಶಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಾಜಿ ಅಧ್ಯಕ್ಷ ಜೋ ಬೈಡನ್ ಅಧಿಕಾರಾವಧಿಯಲ್ಲಿ ಅಮೆರಿಕವು ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಅನ್ನು ನಿರಂತರ ಬೆಂಬಲಿಸಿತ್ತು. ಜತೆಗೆ ರಶ್ಯ ವಿರುದ್ಧದ ಯುದ್ಧದಲ್ಲೂ ನಿರಂತರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಪೂರೈಸುವ ಮೂಲಕ ನೆರವು ನೀಡಿತ್ತು.
ಈ ಮಧ್ಯೆ, ಯುದ್ಧಕ್ಕೆ ರಶ್ಯವನ್ನು ದೂಷಿಸದ ಹಾಗೂ ಉಕ್ರೇನ್ ನ ಗಡಿಗಳ ಉಲ್ಲೇಖವಿಲ್ಲದ ಕರಡು ನಿರ್ಣಯವನ್ನು ಅಮೆರಿಕ ಪ್ರಸ್ತಾಪಿಸಿತ್ತು. ಉಕ್ರೇನ್ ಸಂಘರ್ಷಕ್ಕೆ ತ್ವರಿತ ಅಂತ್ಯಕ್ಕೆ ಕರೆ ನೀಡುವ, ಆದರೆ ಉಕ್ರೇನ್ ನ ಪ್ರಾದೇಶಿಕ ಸಮಗ್ರತೆಯ ಕುರಿತು ಉಲ್ಲೇಖವಿಲ್ಲದ ಅಮೆರಿಕದ ನಿರ್ಣಯಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಸದಸ್ಯರಿಂದ ಬೆಂಬಲ ದೊರಕಲಿಲ್ಲ. ಬಹುತೇಕ ಸದಸ್ಯ ರಾಷ್ಟ್ರಗಳು ಅಮೆರಿಕ ಸೂಚಿಸಿದ ನಿರ್ಣಯದಲ್ಲಿ ತಿದ್ದುಪಡಿಗೆ ಒತ್ತಡ ಹೇರಿದವು. ತಿದ್ದುಪಡಿ ಮಾಡಿ ಮಂಡಿಸಿದ ನಿರ್ಣಯಕ್ಕೂ 93 ದೇಶಗಳ ಬೆಂಬಲ ದೊರಕಿದೆ. 8 ರಾಷ್ಟ್ರಗಳು ವಿರೋಧಿಸಿದರೆ 73 ದೇಶಗಳು ಮತದಾನದಿಂದ ದೂರ ಉಳಿದಿವೆ.
►ಭದ್ರತಾ ಮಂಡಳಿಯಲ್ಲಿ ಅಮೆರಿಕದ ನಿರ್ಣಯ ಪಾಸ್
ತಿದ್ದುಪಡಿ ಮಾಡದ ನಿರ್ಣಯವನ್ನು ಅಮೆರಿಕ 15 ಸದಸ್ಯರ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಂಡಿಸಿದಾಗ ನಿರ್ಣಯದ ಪರ 10 ಮತಗಳು ಬಿದ್ದರೆ ಯಾರೂ ವಿರೋಧಿಸಲಿಲ್ಲ. ಐದು ಸದಸ್ಯರು ಗೈರು ಹಾಜರಾಗಿದ್ದರು.
ಭದ್ರತಾ ಮಂಡಳಿಯಲ್ಲಿ ನಿರ್ಣಯ ಅಂಗೀಕಾರಗೊಳ್ಳಲು ಕನಿಷ್ಟ 9 ಸದಸ್ಯರ ಬೆಂಬಲದ ಅಗತ್ಯವಿದ್ದು ಅಮೆರಿಕ, ರಶ್ಯ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ತಮ್ಮ ವೀಟೊ ಅಧಿಕಾರವನ್ನು ಚಲಾಯಿಸದಿದ್ದರೆ ನಿರ್ಣಯ ಅನುಮೋದನೆ ಪಡೆಯುತ್ತದೆ. ಸೋಮವಾರ ಭದ್ರತಾ ಮಂಡಳಿಯಲ್ಲಿ ನಡೆದ ಮತದಾನದಿಂದ ಫ್ರಾನ್ಸ್, ಬ್ರಿಟನ್, ಡೆನ್ಮಾರ್ಕ್, ಗ್ರೀಸ್ ಮತ್ತು ಸ್ಲೊವೇನಿಯಾ ದೂರ ಉಳಿದವು.
► ಅಮೆರಿಕ ನಿಲುವಿಗೆ ಸ್ವಾಗತ: ರಶ್ಯ
ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಯುದ್ಧದ ನಿರ್ಣಯ ಮಂಡನೆಯ ಸಂದರ್ಭ ಅಮೆರಿಕ ತಳೆದ ಸಮತೋಲಿತ ನಿಲುವನ್ನು ಸ್ವಾಗತಿಸುವುದಾಗಿ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಉಕ್ರೇನ್ ಸಂಘರ್ಷವನ್ನು ಪರಿಹರಿಸಲು ಪ್ರಯತ್ನಿಸುವ ಗುರಿಯನ್ನು ಹೊಂದಿರುವ ಹೆಚ್ಚು ಸಮತೋಲಿತ ನಿಲುವನ್ನು ಅಮೆರಿಕ ತಳೆದಿದೆ. ಆದರೆ ಯುರೋಪಿಯನ್ ನಾಯಕರ ಹೇಳಿಕೆಗಳು ಸಮತೋಲನವನ್ನು ಸಂಕೇತಿಸುವುದಿಲ್ಲ. ಆದರೆ ಬಹುಷಃ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ನಡುವಿನ ಸಂಪರ್ಕದ ಪರಿಣಾಮವಾಗಿ ಹೇಗಾದರೂ ಯುರೋಪ್ ಕೂಡಾ ಹೆಚ್ಚಿನ ಸಮತೋಲಿತ ನಿರ್ಧಾರ ಕೈಗೊಳ್ಳಲಿದ್ದಾರೆ' ಎಂದು ಪೆಸ್ಕೋವ್ ಮಾಸ್ಕೋದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.