ಇರಾನ್ ಮೇಲೆ ಮತ್ತೆ ದಾಳಿ ನಡೆಸಿದ ಅಮೆರಿಕ : ಮಧ್ಯಪ್ರಾಚ್ಯದ ಸೇನಾ ನೆಲೆಗಳ ಮೇಲಿನ ದಾಳಿಗೆ ಪ್ರತಿದಾಳಿ ಎಂದ CENTCOM

Update: 2026-07-30 07:56 IST

Photo: x.com/trtworld

ಟೆಹ್ರಾನ್ : ಮಧ್ಯಪ್ರಾಚ್ಯ ಸಂಘರ್ಷವು ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಬುಧವಾರದಂದು ಅಮೆರಿಕ ಸೇನೆ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ.

ಯುದ್ಧವು ಹೊಸ ಪ್ರದೇಶಗಳಿಗೆ ವಿಸ್ತರಿಸುತ್ತಾ ಹೆಚ್ಚಿನ ದೇಶಗಳನ್ನು ಆವರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಈ ದಾಳಿಗಳು ನಡೆದಿದ್ದು, ಈ ಬಗ್ಗೆ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಹೇಳಿಕೆಯನ್ನು ಬಿಡುಗಡೆ ಮಾಡಿದೆ.

"ಅಮೆರಿಕದ ಪಡೆಗಳು ಇಂದು ರಾತ್ರಿ 8:00 ಗಂಟೆಗೆ ಇರಾನ್ ಮೇಲೆ ದಾಳಿಗಳನ್ನು ಪ್ರಾರಂಭಿಸಿವೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಬುಧವಾರ ಇರಾನ್ ನಡೆಸಲು ಯತ್ನಿಸಿದ ದಾಳಿಗಳಿಗೆ ಪ್ರತ್ಯುತ್ತರವಾಗಿ ಈ ಪ್ರಬಲ ದಾಳಿಗಳನ್ನು ನಡೆಸಲಾಗಿದೆ" ಎಂದು CENTCOM ತಿಳಿಸಿದೆ.

ಅಮೆರಿಕದ ಈ ದಾಳಿಯು ಕೆಶ್ಮ್‌ನ ವಸತಿ ಕಟ್ಟಡದ ಮೇಲೆ ಗುರಿಯಾಗಿಸಿಕೊಂಡು ನಡೆದಿದೆ. ಇಬ್ಬರು ವ್ಯಕ್ತಿಗಳು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಹೊರ್ಮೊಜ್ಗನ್ ಪ್ರಾಂತ್ಯದ ಉಪ ರಾಜ್ಯಪಾಲರನ್ನು ಉಲ್ಲೇಖಿಸಿ ಇರಾನ್‌ನ ಐಆರ್‌ಐಬಿ ವರದಿ ಮಾಡಿದೆ.

ಇದೀಗ, ದಾಳಿ ನಡೆದ ಸ್ಥಳದಿಂದ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇರಾನ್‌ನ 'ತಸ್ನಿಮ್' ಸುದ್ದಿ ಸಂಸ್ಥೆಯ ವರದಿ ತಿಳಿಸಿದ್ದು, ಘಟನಾ ಸ್ಥಳದಲ್ಲಿ ಶೋಧ ಕಾರ್ಯ ಹಾಗೂ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಅಮೆರಿಕ ಪಡೆಗಳು ನೈಋತ್ಯ ಫಾರ್ಸ್ ಪ್ರಾಂತ್ಯದ ಕಾಝೆರೂನ್ ನಗರದ ಹೊರವಲಯದಲ್ಲಿರುವ ಪ್ರದೇಶವನ್ನು ಗುರಿಯಾಗಿಸಿಕೊಂಡಿವೆ ಹಾಗೂ ಪರ್ಷಿಯನ್ ಕೊಲ್ಲಿಯಲ್ಲಿರುವ ಕಿಶ್ ದ್ವೀಪದ ಮೇಲೆಯೂ ದಾಳಿ ನಡೆಸಿವೆ ಎಂದು ತಸ್ನಿಮ್ ತಿಳಿಸಿದೆ.

ಫಾರ್ಸ್ ಪ್ರಾಂತ್ಯದ ಕ್ಷಿಪಣಿ ದಾಳಿಯ ನಂತರ ಕಿಶ್ ದ್ವೀಪದಲ್ಲಿ ಎರಡು ದೊಡ್ಡ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಆದರೆ ದ್ವೀಪದ ವಿಮಾನ ನಿಲ್ದಾಣ ಮತ್ತು ಪ್ರಯಾಣಿಕರ ದೋಣಿ ಸೇವೆಗಳ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುಂಚೆ, ಬುಧವಾರದಂದು, ಈಜಿಪ್ಟ್‌ನ ಮೆಡಿಟರೇನಿಯನ್ ಬಂದರು ದಮಿಯೆಟ್ಟಾದಲ್ಲಿ ಅಮೆರಿಕ ಒಡೆತನದ ಗ್ಯಾಸ್ ಶೇಖರಣಾ ಟ್ಯಾಂಕರ್‌ಗೆ ಡ್ರೋನ್ ದಾಳಿಯಾಗಿದೆ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ಆಂಬ್ರೆ ತಿಳಿಸಿತ್ತು. ಬಂದರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಈಜಿಪ್ಟ್‌ನ ಪೆಟ್ರೋಲಿಯಂ ಸಚಿವಾಲಯದ ಹೇಳಿಕೆ ದೃಢಪಡಿಸಿದೆಯಾದರೂ, ಅದು ಡ್ರೋನ್ ದಾಳಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.

ಮತ್ತೊಂದೆಡೆ, ಪೂರ್ವ ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಗುಂಪುಗಳ ಮೇಲೆ ಅಮೆರಿಕ ಮತ್ತು ಸೌದಿ ಪಡೆಗಳು ಜಂಟಿ ದಾಳಿ ನಡೆಸಿವೆ.

ಈ ಮಧ್ಯೆ, ಜೋರ್ಡಾನ್‌ನಲ್ಲಿರುವ ಅಮೆರಿಕದ ಪಡೆಗಳ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News